ತಿರುವನಂತಪುರ: 'ತಾನು ಅಧ್ಯಕ್ಷ ಸ್ಥಾನ ತೊರೆಯುವ ಇಂಗಿತ ವ್ಯಕ್ತಪಡಿಸಿದ್ದು, ಈ ವಿಚಾರವನ್ನು ರಾಷ್ಟ್ರೀಯ ನಾಯಕರ ಗಮನಕ್ಕೂ ತಂದಿರುವುದಾಗಿ ಕೆಲ ಮಾಧ್ಯಮಗಳು ಸುದ್ದಿ ಬಿತ್ತರಿಸಿವೆ. ಅವು ಆಧಾರ ರಹಿತವಾದುವು' ಎಂದು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಅಧ್ಯಕ್ಷ ಕೆ.ಸುಧಾಕರನ್ ಬುಧವಾರ ಹೇಳಿದ್ದಾರೆ.
ಸುಧಾಕರನ್ ಅವರು ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಆರ್‌ಎಸ್‌ಎಸ್ ಪರ ಹೇಳಿಕೆಗಳನ್ನು ನೀಡಿದ್ದರು. ಅವರು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರಿಗೆ ಪತ್ರ ಬರೆದಿದ್ದು, ಅಧ್ಯಕ್ಷ ಸ್ಥಾನ ತೊರೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆರೋಗ್ಯದ ಸಮಸ್ಯೆ ಜೊತೆಗೆ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಸೇರಿದಂತೆ ಪಕ್ಷದ ಕೆಲ ನಾಯಕರಿಂದ ತಮಗೆ ಸಹಕಾರ ಸಿಗದಿರುವ ವಿಚಾರವನ್ನೂ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.
'ಮಾಧ್ಯಮಗಳ ವರದಿಗಳು ದುರುದ್ದೇಶದಿಂದ ಕೂಡಿವೆ. ಕೆಲ ಮಾಧ್ಯಮಗಳು ತಮ್ಮನ್ನು ಹಣಿಯುವ, ಆ ಮೂಲಕ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡುತ್ತಿವೆ' ಎಂದು ಟೀಕಿಸಿದ್ದಾರೆ.
ಮಾಧ್ಯಮಗಳ ವರದಿ ತಳ್ಳಿಹಾಕಿರುವ ಸತೀಶನ್ ಅವರು, 'ಸುಧಾಕರನ್ ಹಾಗೂ ತಮ್ಮ ನಡುವೆ ಉತ್ತಮ ಒಡನಾಟ ಹಾಗೂ ಹೊಂದಾಣಿಕೆ ಇದೆ' ಎಂದು ಸ್ಪಷ್ಟಪಡಿಸಿದ್ದಾರೆ.
ಸುಧಾಕರನ್ ನಡೆಯ ವಿರುದ್ಧ ಸತೀಶನ್ ಮಂಗಳವಾರ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಆರ್‌ಎಸ್‌ಎಸ್ ಪರ ಹೇಳಿಕೆಗಳನ್ನು ನೀಡದಂತೆ ಸುಧಾಕರನ್ ಅವರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ತಾರಿಕ್ ಅನ್ವರ್ ಹೇಳಿದ್ದರು.