ಕೊಚ್ಚಿ: ಕೇರಳದ ಜೋಡಿಯೊಂದು ಭಾರತೀಯ ಸೇನೆಗೆ ತಮ್ಮ ಮದುವೆಗೆ ಬರುವಂತೆ ಆಹ್ವಾನಿಸಿರುವ ಆಹ್ವಾನ ಪತ್ರಿಕೆಯ ಫೋಟೋ ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಇಂಡಿಯನ್ ಆರ್ಮಿಯೇ ಖುದ್ದಾಗಿ ಫೋಟೋ ಶೇರ್ ಮಾಡಿ ನವ ಜೋಡಿಗೆ ಶುಭ ಹಾರೈಸಿದ್ದರು.
ಈ ಫೋಟೋ ನೆಟ್ಟಿಗರ ಮನವನ್ನು ಸೆಳೆದಿದೆ. ಇದೀಗ ಕೇರಳದ ಪಾಂಗೋಡ್ನಲ್ಲಿರುವ ಇಂಡಿಯನ್ ಆರ್ಮಿ ಶಿಬಿರಕ್ಕೆ ದಂಪತಿಯನ್ನು ಕರೆಸಿ, ಸನ್ಮಾನ ಮಾಡಿದೆ.
ಪಾಂಗೋಡ್ ಸೇನಾ ಶಿಬಿರದ ಬ್ರಿಗೆಡಿಯರ್ ಹಾಗೂ ಕಮಾಂಡರ್ ಲಲಿತಾ ಶರ್ಮ ಅವರು ನವದಂಪತಿಗೆ ಸನ್ಮಾನಿಸಿದರು. ತಿರುವನಂತಪುರದ ರಾಹುಲ್ ಮತ್ತು ಕಾರ್ತಿಕಾ ನವೆಂಬರ್ 10ರಂದು ಸಪ್ತಪದಿ ತುಳಿದರು.
ಮದುವೆ ಸಮಾರಂಭಕ್ಕೆ ಹಾಜರಾಗದಿದ್ದರೂ, ಸೇನಾ ಕಮಾಂಡರ್ ದಂಪತಿಯನ್ನು ನೆನಪಿಸಿಕೊಂಡು, ಆಹ್ವಾನಿಸಿ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಮದುವೆಯ ಉಡುಗೊರೆ ಸಹ ನೀಡಿದರು. ಸಮವಸ್ತ್ರದಲ್ಲಿದ್ದರೂ, ಇಲ್ಲದಿದ್ದರೂ ಪ್ರತಿಯೊಬ್ಬ ನಾಗರಿಕನ ಕೊಡುಗೆ ಅಮೂಲ್ಯವಾಗಿದೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ಕಮಾಂಡರ್ ಹೇಳಿದರು. ತಮ್ಮ ಕರೆಸಿ ಸನ್ಮಾನ ಮಾಡಿದ್ದಕ್ಕಾಗಿ ದಂಪತಿ ಧನ್ಯವಾದ ತಿಳಿಸಿದರು.
ಆಹ್ವಾನ ಪತ್ರಿಕೆಯಲ್ಲಿ ಏನಿತ್ತು?
ಪ್ರೀತಿಯ ಹೀರೋಗಳೇ ನವೆಂಬರ್ 10ರಂದು ನಾವು ಮದುವೆ ಆಗುತ್ತಿದ್ದೇವೆ. ನಮ್ಮ ದೇಶದ
ಬಗೆಗಿನ ಪ್ರೀತಿ, ಸಂಕಲ್ಪ ಮತ್ತು ದೇಶಭಕ್ತಿಗಾಗಿ ನಾವು ನಿಜವಾಗಿಯೂ
ಕೃತಜ್ಞರಾಗಿರುತ್ತೇವೆ. ನಮ್ಮನ್ನು ಸುರಕ್ಷಿತವಾಗಿರಿಸಿದ್ದಕ್ಕಾಗಿ ನಾವು ನಿಮಗೆ ಆಳವಾದ
ಕೃತಜ್ಞತೆಯ ಋಣವನ್ನು ತೀರಿಸುತ್ತೇವೆ. ನಿಮ್ಮಿಂದಾಗಿ ನಾವು ಶಾಂತಿಯುತವಾಗಿ
ಮಲಗಿದ್ದೇವೆ. ನಮ್ಮ ಪ್ರೀತಿಪಾತ್ರರ ಜೊತೆ ನಮಗೆ ಸಂತೋಷದ ದಿನಗಳನ್ನು ನೀಡಿದ್ದಕ್ಕಾಗಿ
ನಿಮಗೆ ಧನ್ಯವಾದಗಳು. ನಿಮ್ಮಿಂದಾಗಿ ನಾವು ಸುಖವಾಗಿ ಮದುವೆಯಾಗುತ್ತಿದ್ದೇವೆ. ನಮ್ಮ ಈ
ವಿಶೇಷ ದಿನದಂದು ನಿಮ್ಮನ್ನು ಆಹ್ವಾನಿಸಲು ನಾವು ತುಂಬಾ ಸಂತೋಷಪಡುತ್ತೇವೆ. ನಿಮ್ಮ
ಉಪಸ್ಥಿತಿ ಮತ್ತು ಆಶೀರ್ವಾದವನ್ನು ನಾವು ಬಯಸುತ್ತೇವೆ ಎಂದು ಜೋಡಿ ಕೇಳಿಕೊಂಡಿತ್ತು.