ನವದೆಹಲಿ: ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ಗ್ರಾಮ ನ್ಯಾಯಾಲಯಗಳ ನಿರ್ಮಾಣಕ್ಕೆ ಕೇಂದ್ರ ಮತ್ತು ಎಲ್ಲ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕೆಂದು 2019ರಲ್ಲಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಎಲ್ಲ ಹೈಕೋರ್ಟ್‌ಗಳಿಂದ ಸುಪ್ರೀಂಕೋರ್ಟ್ ಪ್ರತಿಕ್ರಿಯೆ ಕೇಳಿದೆ.
ನ್ಯಾಯಮೂರ್ತಿ ಎಸ್.ಎ. ನಜೀರ್ ಮತ್ತು ವಿ. ರಾಮಸುಬ್ರಮಣಿಯನ್ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ವಿಭಾಗೀಯ ಪೀಠ, ದೇಶದ ಎಲ್ಲ ಹೈಕೋರ್ಟ್‌ಗಳ ರಿಜಿಸ್ಟ್ರಾರ್ ಜನರಲ್ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಅರ್ಜಿದಾರ ಎನ್‌ಜಿಒ ಸೊಸೈಟೀಸ್ ಫಾರ್ ಫಾಸ್ಟ್ ಜಸ್ಟಿಸ್ ಮತ್ತು ಅದರ್ಸ್ ನ್ಯಾಷನಲ್ ಫೆಡರೇಶನ್ ಪರ ಹಾಜರಾಗಿದ್ದ ವಕೀಲ ಪ್ರಶಾಂತ್ ಭೂಷಣ್, 2022ರಲ್ಲಿ ಸುಪ್ರೀಂಕೋರ್ಟ್ ನಿರ್ದೇಶನದ ಹೊರತಾಗಿಯೂ ಕೆಲ ರಾಜ್ಯ ಸರ್ಕಾರಗಳು ಈವರೆಗೆ ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ವಾದಿಸಿದರು.
ಸಂತ್ರಸ್ತರು ವಕೀಲರ ಅಗತ್ಯವಿಲ್ಲದೆ ತಮ್ಮ ವ್ಯಾಜ್ಯಗಳ ಇತ್ಯರ್ಥಕ್ಕೆ ಈ ಗ್ರಾಮ ನ್ಯಾಯಾಲಯಗಳು ವೇದಿಕೆಯಾಗಬಹುದು ಎಂದು ಪ್ರಶಾಂತ್ ಭೂಷಣ್ ಹೇಳಿದ್ಧರೆ.
ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್ 5ಕ್ಕೆ ನಿಗದಿ ಮಾಡಲಾಗಿದೆ.
4 ವಾರಗಳಲ್ಲಿ ಗ್ರಾಮ ನ್ಯಾಯಾಲಯಗಳನ್ನು ನಿರ್ಮಾಣ ಮಾಡುವಂತೆ 2020ರಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ನಿರ್ದೇಶನ ಸಂಬಂಧ ರಾಜ್ಯ ಸರ್ಕಾರಗಳು ಇನ್ನೂ ಅಧಿಸೂಚನೆ ಹೊರಡಿಸಿಲ್ಲ.
ದೇಶದ ಜನರ ಮನೆ ಬಾಗಿಲಿಗೆ ನ್ಯಾಯ ತೀರ್ಮಾನ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಗ್ರಾಮ ನ್ಯಾಯಾಲಯಗಳ ಕಾಯ್ದೆಯನ್ನು 2008ರಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲಾಗಿತ್ತು.