ಕೋಲ್ಕತ್ತ: ಬಂಗಾಳಿ ಯುವ ನಟಿ ಐಂದ್ರಿಲಾ ಶರ್ಮಾ (24) ಹೃದಯಸ್ತಂಭನದಿಂದ ಭಾನುವಾರ ಮೃತಪಟ್ಟಿದ್ದಾರೆ.
ಹೃದಯಾಘಾತವಾಗಿದ್ದರಿಂದ ನವೆಂಬರ್ 1 ರಂದು ಅವರನ್ನು ಕೋಲ್ಕತ್ತದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಆದರೆ, ಹೃದಯ ಸ್ತಂಭನದಿಂದ ಮೃತಪಟ್ಟಿರುವುದಾಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಈ ಹಿಂದೆ ಅವರು ಕ್ಯಾನ್ಸರ್‌ನಿಂದ ಚೇತರಿಸಿಕೊಂಡಿದ್ದು ವರದಿಯಾಗಿತ್ತು. ಆದರೆ, 24 ವರ್ಷದ ನಟಿ ಐಂದ್ರಿಲಾ ಹೃದಯಾಘಾತವನ್ನು ಗೆಲ್ಲಲಾಗಲಿಲ್ಲ.
ಬಂಗಾಳಿ ಜನಪ್ರಿಯ ಧಾರಾವಾಹಿಯಾದ 'ಜೀಬನ್ ಜ್ಯೋತಿ, ಜೀಬನ್ ಕಾತಿ'ಯಲ್ಲಿ ಅವರು ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದರು. ಅಲ್ಲದೇ ಅನೇಕ, ಧಾರಾವಾಹಿಗಳಲ್ಲಿ, ವೆಬ್‌ಸಿರೀಸ್‌ಗಳಲ್ಲಿ ನಟಿಸಿದ್ದರು. ಸೋಶಿಯಲ್ ಮಿಡಿಯಾದಲ್ಲಿ ಸಕ್ರಿಯರಾಗಿದ್ದರು.
ಕಳೆದ ವಾರವಷ್ಟೇ 'ಕುಸುಮ್', 'ಕಸೌತಿ ಝಿಂದಗಿ ಕಿ' ಮತ್ತು 'ಝಿದ್ದಿ ದಿಲ್ ಮಾನೆ ನಾ' ನಂತಹ ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ಕಿರುತೆರೆ ನಟ ಸಿದ್ಧಾಂತ್ ಸೂರ್ಯವಂಶಿ (46) ಅವರು ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತದಿಂದ ಮುಂಬೈನಲ್ಲಿ ನಿಧನರಾಗಿದ್ದರು.