ನವದೆಹಲಿ (ಪಿಟಿಐ): 'ಭ್ರಷ್ಟರು ಎಷ್ಟೇ ಪ್ರಭಾವಿಗಳಾಗಿದ್ದರೂ ಶಿಕ್ಷೆಯಿಂದ ಪಾರಾಗಲು ಬಿಡಬೇಡಿ. ಅವರಿಗೆ ರಾಜಕೀಯ ಹಾಗೂ ಸಾಮಾಜಿಕ ಸ್ಥಾನಮಾನ ದೊರೆಯದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರ ತಡೆ ಘಟಕಗಳ ಅಧಿಕಾರಿಗಳಿಗೆ ಕಿವಿಮಾತು ಹೇಳಿದ್ದಾರೆ.
ಕೇಂದ್ರ ಜಾಗೃತ ಆಯೋಗವು (ಸಿವಿಸಿ) ಗುರುವಾರ ಆಯೋಜಿಸಿದ್ದ 'ಜಾಗೃತಿ ಅರಿವು ಸಪ್ತಾಹ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಸಮಾಜದಲ್ಲಿ ಭ್ರಷ್ಟರನ್ನು ವೈಭವೀಕರಿಸಲಾಗುತ್ತಿದೆ. ಪ್ರಶಸ್ತಿ, ಪುರಸ್ಕಾರಗಳಿಗೆ ಅವರ ಹೆಸರನ್ನು ಸೂಚಿಸಲಾಗುತ್ತಿದೆ. ತಮ್ಮನ್ನು ತಾವು ಪ್ರಾಮಾಣಿಕರೆಂದು ಕರೆದುಕೊಳ್ಳುವ ವ್ಯಕ್ತಿಗಳು ಕಿಂಚಿತ್ತೂ ನಾಚಿಕೆಯಿಲ್ಲದೆ ಭ್ರಷ್ಟರೊಂದಿಗೆ ಫೋಟೊ ಕ್ಲಿಕ್ಕಿಸಿಕೊಳ್ಳುತ್ತಾರೆ. ಈ ಪರಿಸ್ಥಿತಿ ನಮ್ಮ ಸಮಾಜಕ್ಕೆ ಶೋಭೆ ತರುವಂತಹದ್ದಲ್ಲ' ಎಂದಿದ್ದಾರೆ.
'ಭ್ರಷ್ಟಾಚಾರ ನಿಯಂತ್ರಿಸುವ ದಿಸೆಯಲ್ಲಿ ಕೆಲಸ ಮಾಡುತ್ತಿರುವ ಕೇಂದ್ರ ಜಾಗೃತ ಆಯೋಗದಂತಹ ಏಜೆನ್ಸಿಗಳು ರಕ್ಷಣಾತ್ಮಕವಾಗಿರಬೇಕಿಲ್ಲ. ದೇಶದ ಕಲ್ಯಾಣಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದುದೇ ಆದಲ್ಲಿ ಪಾಪಪ್ರಜ್ಞೆಯಲ್ಲಿ ಬದುಕುವ ಅಗತ್ಯವಿಲ್ಲ' ಎಂದು ತಿಳಿಸಿದ್ದಾರೆ.
'ಈ ದೇಶದ ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿರ್ಮೂಲನೆ ಮಾಡಬೇಕಿರುವುದು ಪ್ರತಿಯೊಬ್ಬ ಅಧಿಕಾರಿಯ ಆದ್ಯ ಕರ್ತವ್ಯ. ಪಟ್ಟಭದ್ರ ಹಿತಾಸಕ್ತಿಗಳನ್ನು ಹೊಂದಿರುವ ಜನರು ಪ್ರಾಮಾಣಿಕ ಅಧಿಕಾರಿಗಳನ್ನು ದೂರುತ್ತಾರೆ. ಅವರ ಹೆಸರು ಕೆಡಿಸಲು ಯತ್ನಿಸುತ್ತಾರೆ. ಸಂಸ್ಥೆಗಳ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾರೆ. ಅದರತ್ತ ಹೆಚ್ಚು ಗಮನ ನೀಡಬಾರದು' ಎಂದು ಹೇಳಿದ್ದಾರೆ.
'ಭ್ರಷ್ಟಾಚಾರ ನಿಯಂತ್ರಣ ವಿಚಾರದಲ್ಲಿ ಸರ್ಕಾರ ತೋರುತ್ತಿರುವ ಬದ್ಧತೆಯ ರೀತಿಯಲ್ಲೇ ಎಲ್ಲಾ ಇಲಾಖೆಗಳೂ ಈ ಪಿಡುಗನ್ನು ತೊಡೆದು ಹಾಕಲು ಸಂಕಲ್ಪ ಮಾಡಬೇಕು. ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಭ್ರಷ್ಟಾಚಾರ ರಹಿತವಾದ ಆಡಳಿತ ವ್ಯವಸ್ಥೆ ರೂಪಿಸಲು ನಾವೆಲ್ಲಾ ಪ್ರಯತ್ನಿಸಬೇಕು' ಎಂದು ಕರೆನೀಡಿದ್ದಾರೆ.
'ಪ್ರಧಾನಿಯಾಗಿ ನಾನು ಹಲವು ಟೀಕೆ ಹಾಗೂ ನಿಂದನೆಗಳನ್ನು ಎದುರಿಸಿದ್ದೇನೆ. ನೀವು ಪ್ರಾಮಾಣಿಕರಾಗಿದ್ದರೆ, ಆ ಹಾದಿಯಲ್ಲಿ ಸಾಗುತ್ತಿದ್ದರೆ ಜನರು ನಿಮ್ಮ ಬೆನ್ನಿಗೆ ನಿಲ್ಲುತ್ತಾರೆ. ಮೂಲ ಸೌಕರ್ಯಗಳ ಅಭಾವ ಹಾಗೂ ಸರ್ಕಾರದ ಒತ್ತಡವು ಭ್ರಷ್ಟಾಚಾರಕ್ಕೆ ಮೂಲ ಕಾರಣವಾಗಿದೆ. ಈ ವ್ಯವಸ್ಥೆಯನ್ನು ನಾವು ಬದಲಿಸುತ್ತೇವೆ. ಬೇಡಿಕೆ ಹಾಗೂ ಪೂರೈಕೆಯ ನಡುವಣ ಅಂತರ ತಗ್ಗಿಸುತ್ತೇವೆ' ಎಂದಿದ್ದಾರೆ.