ನವದೆಹಲಿ:ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ)ದ ತೀರ್ಪಿನ ಬಳಿಕ ಗೂಗಲ್ ಇನ್-ಆಯಪ್ ಖರೀದಿಗಾಗಿ ಆಯಪ್ ಡೆವಲಪರ್ ಗಳು ತನ್ನ ಗೂಗಲ್ ಪ್ಲೇ ಬಿಲ್ಲಿಂಗ್ ವ್ಯವಸ್ಥೆಯನ್ನು ಬಳಸುವುದನ್ನು ಕಡ್ಡಾಯಗೊಳಿಸಿರುವ ತನ್ನ ನೀತಿಯ ಅನುಷ್ಠಾನಕ್ಕೆ ವಿರಾಮ ನೀಡಿದೆ. ತಾನು ತನ್ನ 'ಕಾನೂನು ಆಯ್ಕೆಗಳನ್ನು 'ಪುನರ್ಪರಿಶೀಲಿಸುತ್ತಿದ್ದೇನೆ ಮತ್ತು ಆಯಂಡ್ರಾಯ್ಡಾ ಮತ್ತು ಪ್ಲೇಗಳಲ್ಲಿ ಹೂಡಿಕೆಯನ್ನು ಮುಂದುವರಿಸಬಹುದೇ ಎನ್ನುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದೇನೆ ಎಂದು ಗೂಗಲ್ ಮಂಗಳವಾರ ತನ್ನ ಬ್ಲಾಗ್ನಲ್ಲಿಯ ಸಪೋರ್ಟ್ ಪೇಜ್ನಲ್ಲಿ ತಿಳಿಸಿದೆ.
ಕಳೆದ ತಿಂಗಳು ಎರಡು ಪ್ರತ್ಯೇಕ ಪ್ರಕರಣಗಲ್ಲಿ ಗೂಗಲ್ ವಿರುದ್ಧ ಎರಡು ಭಿನ್ನ ಆದೇಶಗಳನ್ನು ಹೊರಡಿಸಿದ್ದ ಸಿಸಿಐ ಅದಕ್ಕೆ ದಂಡಗಳನ್ನೂ ವಿಧಿಸಿದೆ. ಈ ಪೈಕಿ 936.44 ಕೋ.ರೂ.ಗಳ ದಂಡವನ್ನು ಗೂಗಲ್ ತನ್ನ ಪ್ಲೇಸ್ಟೋರ್ ನೀತಿಗಳಿಗೆ ಸಂಬಂಧಿಸಿದಂತೆ ಮಾರುಕಟ್ಟೆಯಲ್ಲಿನ ತನ್ನ ಪ್ರಮುಖ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ ವಿಧಿಸಲಾಗಿದೆ.ಇಂತಹ ವ್ಯವಹಾರ ಪದ್ಧತಿಗಳಿಂದ ದೂರವಿರುವಂತೆ ಗೂಗಲ್ ಗೆ ಸೂಚಿಸಿರುವ ಸಿಸಿಐ,ತನ್ನ ಆಯಪ್ ಸ್ಟೋರ್ ನಲ್ಲಿ ಥರ್ಡ್ ಪಾರ್ಟಿ ಪಾವತಿ ಸೇವೆಗಳನ್ನು ಬಳಸಲು ಮೊಬೈಲ್ ಆಯಪ್ ಡೆವಲಪರ್ಗಳಿಗೆ ಅವಕಾಶ ನೀಡುವುದು ಸೇರಿದಂತೆ ತನ್ನ ನಡವಳಿಕೆಯನ್ನು ತಿದ್ದಿಕೊಳ್ಳುವಂತೆ ತಾಕೀತು ಮಾಡಿತ್ತು.
ಇದಕ್ಕೂ ಮುನ್ನ ದೇಶದಲ್ಲಿಯ ಆಯಂಡ್ರಾಯ್ಡ್ ಮೊಬೈಲ್ ಸಾಧನ
ಪರಿಸರ ವ್ಯವಸ್ಥೆಗೆ ಸಂಬಂಧಿಸಿಂತೆ ಹಲವಾರು ಕ್ಷೇತ್ರಗಳಲ್ಲಿ ತನ್ನ ಪ್ರಮುಖ ಸ್ಥಾನವನ್ನು
ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ ಸಿಸಿಐ ಗೂಗಲ್ಗೆ 1,338 ಕೋ.ರೂ.ಗಳ ದಂಡವನ್ನು
ವಿಧಿಸಿತ್ತು.2021 ಸೆಪ್ಟಂಬರ್ ವೇಳೆಗೆ ಭಾರತದಲ್ಲಿ ತನ್ನ ಇನ್-ಆಯಪ್ ಪದ್ಧತಿಯನ್ನು
ಆರಂಭಿಸುವುದಾಗಿ ಗೂಗಲ್ 2020ರಲ್ಲಿ ಹೇಳಿತ್ತು. ಇದಕ್ಕೆ ತೀವ್ರ ವಿರೋಧವನ್ನು
ವ್ಯಕ್ತಪಡಿಸಿದ್ದ ಉದ್ಯಮವು ಗೂಗಲ್ ಮಾರುಕಟ್ಟೆಯಲ್ಲಿನ ತನ್ನ ಪ್ರಮುಖ ಸ್ಥಾನವನ್ನು
ದರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಹೇಳಿತ್ತು. ಪೇಟಿಎಮ್ ನ ವಿಜಯಶೇಖರ ಶರ್ಮಾ ಮತ್ತು
ಭಾರತ ಮ್ಯಾಟ್ರಿಮೋನಿಯ ಮುರುಗವೇಲ್ ಜಾನಕಿರಾಮನ್ರಂತಹ ಪ್ರಮುಖ ಭಾರತೀಯ ಅಂತರ್ಜಾಲ
ಉದ್ಯಮಿಗಳು ಈ ಬಗ್ಗೆ ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ತಮ್ಮ ಕಳವಳಗಳನ್ನು
ತಿಳಿಸಿದ್ದರು. ಒತ್ತಡದ ಪರಿಣಾಮವಾಗಿ ಗೂಗಲ್ 2022 ಮಾರ್ಚ್ನಲ್ಲಿ ಮತ್ತು 2022
ಅಕ್ಟೋಬರ್ನಲ್ಲಿ,ಹೀಗೆ ಎರಡು ಬಾರಿ ಭಾರತದಲ್ಲಿ ತನ್ನ ನೀತಿಯ ಅನುಷ್ಠಾನವನ್ನು
ಮುಂದೂಡುವಂತಾಗಿತ್ತು.
ಗೂಗಲ್ ಮತ್ತು ಆಯಪಲ್ ನ ಆಯಪ್ ಸ್ಟೋರ್ ಪಾವತಿ ನೀತಿಗಳ ಮೇಲೆ ಆಯಂಟಿಟ್ರಸ್ಟ್ ನಿಗಾ ಹೆಚ್ಚುತ್ತಿದ್ದಂತೆ ಸೆಪ್ಟಂಬರ್ ನಲ್ಲಿ ಗೂಗಲ್, ಪ್ರಾಯೋಗಿಕ ಯೋಜನೆಯಡಿ ಭಾರತ ಸೇರಿದಂತೆ ಹಲವಾರು ದೇಶಗಳ ನಾನ್-ಗೇಮಿಂಗ್ ಆಯಂಡ್ರಾಯ್ಡ್ ಆಯಪ್ಗಳ ಡೆವಲಪರ್ಗಳಿಗೆ ಥರ್ಡ್ ಪಾರ್ಟಿ ಪಾವತಿ ಆಯ್ಕೆಗಳಿಗೆ ಅವಕಾಶವನ್ನು ನೀಡುವುದಾಗಿ ತಿಳಿಸಿತ್ತು. ಈ ಪರ್ಯಾಯ ಪಾವತಿ ವ್ಯವಸ್ಥೆಗಳಲ್ಲಿ ಡೆವಲಪರ್ಗಳು ತೆರುವ ಶೇ.15-30ರಷ್ಟು ಸೇವಾ ಶುಲ್ಕವು ಶೇ.4ರಷ್ಟು ತಗ್ಗಲಿದೆ.