ಕೋಲ್ಕತ್ತ : ಭಾರತ ಮತ್ತು ಚೀನಾ ನಡುವೆ ನೇರ ವಿಮಾನ ಸಂಚಾರ ಆರಂಭಿಸಬೇಕು. ಉಭಯ ದೇಶಗಳ ಸರ್ಕಾರಗಳು ಈ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡಬೇಕು ಎಂದು ಚೀನಾದ ಕಾನ್ಸುಲ್ ಜನರಲ್ ಝಾ ಲಿಯೂ ಹೇಳಿದ್ದಾರೆ.
2019ರಲ್ಲಿ ಕೋವಿಡ್ ಕಾರಣದಿಂದಾಗಿ ಎರಡೂ ದೇಶಗಳ ನಡುವಿನ ವಿಮಾನ ಸಂಚಾರ ರದ್ದುಗೊಂಡಿದ್ದರಿಂದ ಸಾವಿರಾರು ವಿದ್ಯಾರ್ಥಿಗಳು, ಉದ್ಯಮಿಗಳಿಗೆ ತೊಂದರೆ ಆಗಿದೆ.
ಆದ್ದರಿಂದ ಶೀಘ್ರದಲ್ಲೇ ಉಭಯ ದೇಶಗಳ ನಡುವೆ ನೇರ ವಿಮಾನ ಸಂಚಾರ ಆರಂಭಿಸಬೇಕಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅಂದಾಜು 23,000 ಭಾರತೀಯ ವಿದ್ಯಾರ್ಥಿಗಳು ಚೀನಾದಲ್ಲಿ ವೈದ್ಯಕೀಯ ಅಧ್ಯಯನ ನಡೆಸುತ್ತಿದ್ದು, ನೇರ ವಿಮಾನ ಸಂಚಾರವಿಲ್ಲದ ಕಾರಣ ಅವರ ಅಧ್ಯಯನಕ್ಕೆ ತೊಂದರೆ ಆಗುತ್ತಿದೆ. ಶ್ರೀಲಂಕಾ, ನೇಪಾಳ, ಮ್ಯಾನ್ಮಾರ್ ದೇಶಗಳ ಮೂಲಕ ಚೀನಾಗೆ ಪ್ರಯಾಣ ಮಾಡುವುದು ದುಬಾರಿ ಆಗಿದೆ ಎಂದು ತಿಳಿಸಿದ್ದಾರೆ.
ಮೂರು ವರ್ಷಗಳ ನಂತರ ಬೀಜಿಂಗ್ ಇತ್ತೀಚೆಗೆ ವೀಸಾ ನಿಷೇಧ ತೆರವು ಮಾಡಿದೆ. ಭಾರತ -ಚೀನಾ ನಡುವೆ ಸೀಮಿತ ವಿಮಾನ ಸೇವೆ ಪುನರಾರಂಭಿಸಲು ಉಭಯ ದೇಶಗಳು ಹಲವು ತಿಂಗಳಿಂದ ಮಾತುಕತೆ ನಡೆಸುತ್ತಿವೆ. ಆದರೆ, ಯಾವುದೇ ಪ್ರಗತಿ ಸಾಧಿಸಲಿಲ್ಲ. ನೇರ ವಿಮಾನ ಸಂಪರ್ಕವನ್ನು ಪ್ರಾರಂಭಿಸಬೇಕು. ಹಲವಾರು ಭಾರತೀಯ ವಿದ್ಯಾರ್ಥಿಗಳು ಈಗ ಚೀನಾಕ್ಕೆ ಮರಳಲು ಉತ್ಸುಕರಾಗಿದ್ದಾರೆ ಎಂದು ಲಿಯೂ ಹೇಳಿದರು.