ವಾಷಿಂಗ್ಟನ್: ಕೊರೊನಾ ವೈರಾಣು ಸೋಂಕಿಗೆ ಒಳಗಾದ ಮಕ್ಕಳು ಪಾರ್ಶ್ವವಾಯುಗೆ ಒಳಗಾಗುವ ಅಪಾಯ ಹೆಚ್ಚಿದೆ ಎಂದು ಅಮೆರಿಕದಲ್ಲಿ ಇತ್ತೀಚೆಗೆ ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.
ಪೀಡಿಯಾಟ್ರಿಕ್ ನ್ಯೂರೋಲಾಜಿ ಎಂಬ ನಿಯತಕಾಲಿಕೆಯಲ್ಲಿ ಈ ಅಧ್ಯಯನ ವರದಿಯನ್ನು ಪ್ರಕಟಿಸಲಾಗಿದೆ.
2020ರ ಮಾರ್ಚ್‌ನಿಂದ 2021ರ ಜೂನ್‌ವರೆಗೂ ಇಸ್ಕೀಮಿಕ್ ಪಾರ್ಶ್ವವಾಯುಗೆ (ಮಿದುಳಿಗೆ ರಕ್ತ ಸಂಚಾರದ ಕೊರತೆಯಿಂದ ಉಂಟಾಗುವ ಪಾರ್ಶ್ವವಾಯು) ಒಳಗಾದ 16 ಮಕ್ಕಳ ಕುರಿತ ಮಾಹಿತಿಗಳನ್ನು ಆಸ್ಪತ್ರೆಗಳಿಂದ ಕಲೆಹಾಕಿ ಈ ಅಧ್ಯಯನ ನಡೆಸಲಾಗಿದೆ.
ಈ 16 ರೋಗಿಗಳಲ್ಲಿ ಹೆಚ್ಚಿನವರು 2021ರ ಫೆಬ್ರುವರಿಯಿಂದ ಮೇ ತಿಂಗಳ ಅವಧಿಯಲ್ಲಿ ಪಾರ್ಶ್ವವಾಯುಗೆ ಒಳಗಾಗಿದ್ದಾರೆ. ಮಕ್ಕಳಲ್ಲಿ ಕೊರೊನಾ ವೈರಾಣು ಸೋಂಕು ಹೆಚ್ಚಾಗಿ ಕಂಡುಬಂದ ಅವಧಿಯ ಕೆಲವೇ ದಿನಗಳ ಬಳಿಕ ಇವರಲ್ಲಿ ಪಾರ್ಶ್ವವಾಯು ಕಾಣಿಸಿಕೊಂಡಿದೆ. ಇವರಲ್ಲಿ ಯಾರೂ ಕೋವಿಡ್ ಕಾರಣಕ್ಕಾಗಿ ಗಂಭೀರವಾಗಿ ಅನಾರೋಗ್ಯಕ್ಕೀಡಾಗಿರಲಿಲ್ಲ. ಅಲ್ಲದೆ ಕೆಲವರಲ್ಲಿ ಸೋಂಕಿನ ಲಕ್ಷಣಗಳೂ ಇರಲಿಲ್ಲ.
ವೈರಾಣು ವಿರುದ್ಧ ಹೋರಾಡಲು ಮಕ್ಕಳಲ್ಲಿ ಅತ್ಯಂತ ಹೆಚ್ಚು ರೋಗನಿರೋಧಕಗಳು ಬಿಡುಗಡೆಯಾಗುವ ಕಾರಣ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಹೆಚ್ಚು. ಮಕ್ಕಳಲ್ಲಿ ಪಾರ್ಶ್ವವಾಯು ಕಾಣಿಸಿಕೊಳ್ಳುವ ಸಾಧ್ಯತೆ ಅತ್ಯಂತ ಕಡಿಮೆ. ಆದರೆ, ಕೋವಿಡ್ ಸಾಂಕ್ರಾಮಿಕದ ಬಳಿಕ ಈ ಅಪಾಯ ಹೆಚ್ಚಾಗಿದೆ ಎಂದು ಈ ಅಧ್ಯಯನ ನಡೆಸಿದ ವೈದ್ಯ ಮೇರಿಗ್ಲೆನ್ ಜೆ. ವೀಲ್ಲೆಯುಕ್ಸ್ ತಿಳಿಸಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಪ್ರತಿವರ್ಷ ಸರಾಸರಿ ನಾಲ್ಕು ಮಕ್ಕಳು ಪಾರ್ಶ್ವವಾಯುಗೆ ಒಳಗಾಗುತ್ತಿದ್ದಾರೆ. ವಯಸ್ಕರಿಗೆ ಕಾಣಿಸಿಕೊಳ್ಳುವಂತಹ ರೋಗ ಲಕ್ಷಣಗಳು ಮಕ್ಕಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ.