ಪತ್ತನಂತ್ತಿಟ್ಟ : ಶಬರಿಮಲೆಯ ಅಯ್ಯಪ್ಪ ದೇವಸ್ಥಾನಕ್ಕೆ ಭಕ್ತಸಾಗರವೇ ಹರಿದುಬರುತ್ತಿದ್ದು, ದರ್ಶನ ಸಮಯದಲ್ಲಿ ಕೆಲವು ಮಾರ್ಪಾಡು ಮಾಡಲು ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ.
'ಈ ಎರಡು ವರ್ಷಗಳಲ್ಲಿ ಕೋವಿಡ್ ಕಾರಣಕ್ಕಾಗಿ ದಿನಕ್ಕೆ ಇಂತಿಷ್ಟೇ ಭಕ್ತರಿಗೆ ದರ್ಶನಕ್ಕೆ ಅವಕಾಶವಿತ್ತು.
ಆದರೆ, ಈಗ ನಿರ್ಬಂಧಗಳನ್ನು ತೆರವು ಮಾಡಲಾಗಿದೆ. ಈ ವರ್ಷದ ಶಬರಿಮಲೆ ಯಾತ್ರೆ ಪ್ರಾರಂಭವಾಗಿದೆ. ಈ ಹಿನ್ನೆಲೆಯಲ್ಲಿ ದಿನಕ್ಕೆ ಸುಮಾರು ಲಕ್ಷ ಮಂದಿ ಭಕ್ತಾದಿಗಳು ದರ್ಶನ ಪಡೆಯುತ್ತಿದ್ದಾರೆ' ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದರು.
'ಈ ಮೊದಲು ಬೆಳಿಗ್ಗೆ 3ರಿಂದ ಮಧ್ಯಾಹ್ನ 1ರ ವರೆಗೆ ಮತ್ತು ಸಂಜೆ 4ರಿಂದ ಮಧ್ಯರಾತ್ರಿಯ ವರೆಗೆ ದರ್ಶನಕ್ಕೆ ಅವಕಾಶವಿತ್ತು. ಮಧ್ಯಾಹ್ನ 4ರಿಂದ ಪ್ರಾರಂಭವಾಗುತ್ತಿದ್ದ ದರ್ಶನ ಸಮಯವನ್ನು ಈಗ ಒಂದು ತಾಸು ಮೊದಲೇ ಅಂದರೆ, ಮಧ್ಯಾಹ್ನ 3ರಂದಲೇ ಪ್ರಾರಂಭಿಸಿ ರಾತ್ರಿ 11ರ ವರೆಗೆ ಅವಕಾಶ ನೀಡಲಾಗುವುದು' ಎಂದರು.
'ದೇವಸ್ಥಾನವು ನವೆಂಬರ್ 16ರಿಂದ ಬಾಗಿಲು ತೆರೆದಿದ್ದು, ಸೋಮವಾರ ಸಂಜೆ ವೇಳೆಗೆ 3 ಲಕ್ಷ ಮಂದಿ ಭಕ್ತರು ಅಯ್ಯಪ್ಪನ ದರ್ಶನ ಪಡೆದುಕೊಂಡಿದ್ದಾರೆ. ಸೋಮವಾರ ಒಂದೇ ದಿನ ಸುಮಾರು 70 ಸಾವಿರ ಮಂದಿ ಭಕ್ತರು ಬಂದಿದ್ದರು' ಎಂದು ಮಾಹಿತಿ ನೀಡಿದರು.