ನವದೆಹಲಿ: 1994ರ ಇಸ್ರೊ ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಡಿಜಿಪಿ ಸೇರಿದಂತೆ ನಾಲ್ವರ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಹೊಸದಾಗಿ ಪರಿಗಣಿಸುವಂತೆ ಕೇರಳ ಹೈಕೋರ್ಟ್‌ಗೆ ಸೂಚಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ಗುಜರಾತಿನ ಮಾಜಿ ಡಿಜಿಪಿ ಆರ್.ಬಿ. ಶ್ರೀಕುಮಾರ್, ಕೇರಳದ ಮಾಜಿ ಪೊಲೀಸ್ ಅಧಿಕಾರಿಗಳಾದ ಎಸ್.ವಿಜಯನ್ ಮತ್ತು ತಂಬಿ ಎಸ್. ದುರ್ಗಾ ದತ್ತ್ ಮತ್ತು ಮಾಜಿ ಗುಪ್ತಚರ ಅಧಿಕಾರಿ ಪಿ.ಎಸ್. ಜಯಪ್ರಕಾಶ್ ಅವರಿಗೆ ಜಾಮೀನು ಮಂಜೂರು ಮಾಡಿರುವ ಕೇರಳ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.
'ಯಾವುದೇ ಅಭಿಪ್ರಾಯಗಳಿಂದ ಪ್ರಭಾವಿತರಾಗದೆ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಹೊಸದಾಗಿ ಪರಿಗಣಿಸುವಂತೆ ನಾವು ಹೈಕೋರ್ಟ್‌ಗೆ ಹೇಳುತ್ತೇವೆ' ಎಂದು ನ್ಯಾಯಮೂರ್ತಿ ಎಂ.ಆರ್.ಶಾ ನೇತೃತ್ವದ ನ್ಯಾಯಪೀಠ ಹೇಳಿದೆ.
'ನಾಲ್ವರು ಬಂಧನದಿಂದ ರಕ್ಷಣೆ ಪಡೆದಿರುವುದನ್ನು ಮುಂದುವರಿಸಲಾಗುವುದು' ಎಂದೂ ನ್ಯಾಯಮೂರ್ತಿ ಸಿ.ಟಿ. ರವಿಕುಮಾರ್ ಅವರನ್ನೂ ಒಳಗೊಂಡಿರುವ ನ್ಯಾಯಪೀಠ ತಿಳಿಸಿದೆ.
ಬೇಹುಗಾರಿಕೆ ಪ್ರಕರಣದಲ್ಲಿ ಇಸ್ರೊ ಮಾಜಿ ವಿಜ್ಞಾನಿ ನಂಬಿ ನಾರಾಯಣನ್ ಮತ್ತು ಮಾಲ್ಡೀವ್ಸ್‌ನ ಇಬ್ಬರು ಪ್ರಜೆಗಳನ್ನು ಬಂಧಿಸಲಾಗಿತ್ತು.