ನವದೆಹಲಿ: ವಿದೇಶಗಳಲ್ಲಿ ಸೆಟಲೈಟ್ ಕ್ಯಾಂಪಸ್‍ಗಳನ್ನು ಆರಂಭಿಸುವ ಉದ್ದೇಶ ಹೊಂದಿದ ಭಾರತೀಯ ವಿಶ್ವವಿದ್ಯಾನಿಲಯಗಳಿಗೆ ಶೀಘ್ರವೇ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗುವುದು ಹಾಗೂ ಕರಡು ಮಾರ್ಗಸೂಚಿಯನ್ನು ಅಭಿಪ್ರಾಯ ಸಂಗ್ರಹಕ್ಕಾಗಿ ಬಿಡುಗಡೆ ಮಾಡಲಾಗುವುದು ಎಂದು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (UGC) ಅಧ್ಯಕ್ಷ ಎಂ.ಜಗದೀಶ್ ಕುಮಾರ್ (M Jagadesh Kumar) ಪ್ರಕಟಿಸಿದ್ದಾರೆ.
ವಿದೇಶಗಳಲ್ಲಿ ಕ್ಯಾಂಪಸ್ ಆರಂಭಿಸುವುದಕ್ಕೆ ಈ ಮಾರ್ಗಸೂಚಿ ನೀಲನಕ್ಷೆಯಾಗಿರತ್ತದೆ ಹಾಗೂ ನ್ಯಾಷನಲ್ ಇನ್‍ಸ್ಟಿಟ್ಯೂಷನಲ್ ರ್ಯಾಂಕಿಂಗ್ ಫ್ರೇಮ್‍ವರ್ಕ್ (ಎನ್‍ಐಆರ್‍ಎಫ್) ಹಾಗೂ ನ್ಯಾಕ್ ಅಂಕಗಳಿಗೆ ಸಂಬಂಧಿಸಿದಂತೆ ಅರ್ಹತಾ ಮಾನದಂಡವನ್ನು ಕೂಡಾ ಇದು ನಿಗದಿಪಡಿಸಿರುತ್ತದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಈ ಮಾರ್ಗಸೂಚಿ ರೂಪಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಸಾರ್ವಜನಿಕ ಡೊಮೈನ್‍ಗಳಲ್ಲಿ ಇದನ್ನು ವಿಸ್ತೃತ ಸಲಹೆ ಹಾಗೂ ಚರ್ಚೆಗಳಿಗೆ ಮುಂದಿನ ವಾರಗಳಲ್ಲಿ ಬಿಗುಗಡೆ ಮಾಡಲಾಗುವುದು. ಕೆಲ ನಿರ್ದಿಷ್ಟ ಮಾನದಂಡಗಳನ್ನು ನಿರ್ವಹಿಸುವುದು ಅಗತ್ಯ. ಆದ್ದರಿಂದ ರ್ಯಾಂಕಿಂಗ್ ಹಾಗೂ ಮಾನ್ಯತಾ ಅಂಕಗಳಿಗೆ ಅರ್ಹತಾ ಮಾನದಂಡಗಳು ಕೂಡಾ ಇರುತ್ತವೆ ಎಂದು ಸ್ಪಷ್ಟಪಡಿಸಿದರು.
ಈ ಮಾರ್ಗಸೂಚಿ ಶಿಕ್ಷಣದ ಅಂತರರಾಷ್ಟ್ರೀಯ ವಿಸ್ತರಣೆಗೆ ಪೂರಕವಾದ ಹೊಸ ಶಿಕ್ಷಣ ನೀತಿಗೆ ಅನುಸಾರವಾಗಿರುತ್ತದೆ ಎಂದು ಅವರು ಹೇಳಿದರು.