ಕಾಸರಗೋಡು: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ರಾಣಿಪುರ ಬೆಟ್ಟದ ಮೇಲೆ ಪ್ರವಾಸಿಗಳಿಗೆ ವಾಸ್ತವ್ಯಕ್ಕೆ ಸಹಕಾರಿಯಾಗುವ ರೀತಿಯಲ್ಲಿ ಟೆಂಟ್ ಸ್ಟೇ ವ್ಯವಸ್ಥೆ ಏರ್ಪಡಿಸಲು ಕೇರಳ ಅರಣ್ಯ ಇಲಾಖೆ ತೀರ್ಮಾನಿಸಿದೆ.
ಜಿಲ್ಲೆಯಲ್ಲಿ ಪರಿಸರ ಪ್ರವಾಸೋದ್ಯಮ(ಇಕೋ ಟೂರಿಸಂ)ಹಾಗೂ ಅವುಗಳ ಹೆಚ್ಚಿನ ಸಾಧ್ಯತೆಗಳ ಬಗ್ಗೆ ಅವಲೋಕನ ನಡೆಸುವ ನಿಟ್ಟಿನಲ್ಲಿ ಜಿಲ್ಲೆಗೆ ಆಗಮಿಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಈ ಬಗ್ಗೆ ಅವಲೋಕನ ನಡೆಸಿದ್ದು, ರಾಣಿಪುರ ಪ್ರವಾಸಿ ಧಾಮದಲ್ಲಿ ಟೆಂಟ್ ಸ್ಟೇ ಸೌಕರ್ಯ ಒದಗಿಸುವ ಸೂಚನೆಯನ್ನು ನೀಡಿದ್ದಾರೆ.
ರಾಣಿಪುರ ಸಂದರ್ಶಿಸುವ ಪ್ರವಾಸಿಗರಿಗೆ ವನ್ಯಜೀವಿಗಳಿಂದ ಸಂರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಹೋಮ್ ಸ್ಟೇ ಮಾದರಿಯಲ್ಲಿ ಟೆಂಟ್ ಸ್ಟೇ ಸೌಕರ್ಯ ಒದಗಿಸುವುದು ಹಾಗೂ ಕಾಡುಪ್ರಾಣಿಗಳಿಂದ ರಕ್ಷಣೆ ನೀಡುವ ನಿಟ್ಟಿನಲ್ಲಿ ಸೌರಶಕ್ತಿ ಚಾಲಿತ ಆವರಣಬೇಲಿ ನಿರ್ಮಿಸಲಾಗುವುದು. ಇದರ ಜತೆಗೆ ಸ್ನಾನ, ಶೌಚಗೃಹಗಳ ನಿರ್ಮಾಣವೂ ನಡೆಯಲಿದೆ. ರಾಣಿಪುರ ಅರಣ್ಯ ಸಂರಕ್ಷಣಾ ಸಮಿತಿ ಸಹಕಾರದೊಂದಿಗೆ ಯೋಜನೆ ಜಾರಿಗೊಳಿಸಲಾಗುತ್ತಿದೆ. ಅರಣ್ಯ ಇಲಾಖೆಯ ನೇರ ನಿಯಂತ್ರಣದಲ್ಲಿ ಯೋಜನೆ ಜಾರಿಗೊಳಿಸಲಾಗುವುದು ಎಂದೂ ಅಧಿಕಾರಿಗಳು ತಿಳಿಸಿದ್ದಾರೆ. ರಾಣಿಪುರ ಅತ್ಯಂತ ಎತ್ತರದ ನಯನಮನೋಹರ ಗುಡ್ಡಪ್ರದೇಶವಾಗಿದ್ದು, ಟ್ರೆಕ್ಕಿಂಗ್ ನಡೆಸುವವರಿಗೆ ನೆಚ್ಚಿನ ತಾಣವಾಗಿದೆ. ಪ್ರಸಕ್ತ ಈ ಪ್ರದೇಶದಲ್ಲಿ ಟೆಂಟ್ ಸ್ಟೇ ವ್ಯವಸ್ಥೆ ಏರ್ಪಡಿಸುವ ಮೂಲಕ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವುಂಟಾಗುವ ಸಾಧ್ಯತೆಯಿದೆ. ಮಡಿಕೇರಿಯಿಂದ ಕರಿಕೆ ಮೂಲಕ, ಸುಳ್ಯ ಮುಂತಾದೆಡೆಯಿಂದ ಪಾಣತ್ತೂರು ಹಾದಿಯಾಗಿ, ಕಾಸರಗೋಡು, ಕಾಞಂಗಾಡು ಭಾಗದಿಂದ ಪನತ್ತಡಿ ಮೂಲಕವೂ ರಾಣಿಪುರ ಬೆಟ್ಟಕ್ಕೆ ತಲುಪಬಹುದಾಗಿದೆ.
ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ರಾಣಿಪುರದಲ್ಲಿ 'ಟೆಂಟ್ ಸ್ಟೇ'ವ್ಯವಸ್ಥೆ-ಅರಣ್ಯ ಇಲಾಖೆ ಮೇಲ್ನೋಟದಲ್ಲಿ ಜಾರಿ
0
ನವೆಂಬರ್ 01, 2022
Tags