ಕೊಚ್ಚಿ: ಹೊಟ್ಟೆ ನೋವೆಂದು ವೈದ್ಯರ ಬಳಿ ಬಂದ 17 ವರ್ಷದ ಹುಡುಗಿಯೊಬ್ಬಳು, ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಕಣ್ಣೂರು ಜಿಲ್ಲೆಯ ಇರಿಟ್ಟಿ ತಾಲೂಕಿನ ಆಸ್ಪತ್ರೆಯೊಂದರಲ್ಲಿ ನಡೆದಿದೆ.
ಹದಿಹರೆಯದ ಯುವತಿಯೊಬ್ಬಳು ಹೊಟ್ಟೆ ನೋವೆಂದು ವೈದ್ಯರನ್ನು ಕಾಣಲು ಆಸ್ಪತ್ರೆಗೆ ಬಂದಿದ್ದಳು.
ನಂತರ ಆಸ್ಪತ್ರೆಯ ಶೌಚಾಲಯಕ್ಕೆ ತೆರಳಿದ್ದಾಳೆ. ಅಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ನಂತರ ಆಸ್ಪತ್ರೆಯ ಸಿಬ್ಬಂದಿಗೆ ಯುವತಿಗೆ ಹೆರಿಗೆಯಾಗಿರುವುದು ಗಮನಕ್ಕೆ ಬಂದಿದೆ.
ಕೂಡಲೇ ಯುವತಿಯ ಹಾಗೂ ಶಿಶುವಿನ ಆರೋಗ್ಯವನ್ನು ವೈದ್ಯರು ಪರಿಶೀಲಿಸಿ, ಕಣ್ಣೂರು ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಹದಿಹರೆಯದ ಯುವತಿಯ ಮೇಲೆ ಲೈಂಗಿಕ ಶೋಷಣೆ ನಡೆದಿರುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.