ಕೊಚ್ಚಿ: 'ರಾಷ್ಟ್ರೀಯ ಸಮಾವೇಶ' ಮತ್ತು 'ರಾಷ್ಟ್ರೀಯ ಒಮ್ಮತ'ದ ಮೂಲಕವೇ ರಾಜ್ಯಪಾಲರು ತಮ್ಮ ಸ್ಥಾನದ ಆಧಾರದ ಮೇಲೆ ಕುಲಾಧಿಪತಿ ಹುದ್ದೆ ಅಲಂಕರಿಸುತ್ತಾರೆಯೇ ಹೊರತು ಅದು ರಾಜ್ಯ ಸರ್ಕಾರದ ಕೊಡುಗೆಯೇನಲ್ಲ ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಸೋಮವಾರ ಹೇಳಿದ್ದಾರೆ.
ರಾಷ್ಟ್ರೀಯ ಒಮ್ಮತ ಮತ್ತು ರಾಷ್ಟ್ರೀಯ ಆಯೋಗದ ವರದಿ ಅನುಸರಿಸಿ ಕುಲಾಧಿಪತಿ ಹುದ್ದೆ ಹೊಂದಿದ್ದಾರೆ ಮತ್ತು ಯಾವುದೇ ರಾಜ್ಯ ಸರ್ಕಾರವು ಅದರ ವಿರುದ್ಧ ಹೋಗಲು ಸಾಧ್ಯವಿಲ್ಲ ಎಂದು ರಾಜ್ಯಪಾಲರು ಸ್ಪಷ್ಟಪಡಿಸಿದರು.
ವಿಶ್ವವಿದ್ಯಾಲಯದ ನೇಮಕಾತಿಗಳಲ್ಲಿ ಸ್ವಜನಪಕ್ಷಪಾತಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ತಮ್ಮ ಕಚೇರಿಯಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ತಿಳಿದಿಲ್ಲದಿದ್ದರೆ ಅವರು 'ಅಸಮರ್ಥರು' ಎಂದು ಖಾನ್ ಹೇಳಿದರು.
'ಕಣ್ಣೂರು ವಿಶ್ವವಿದ್ಯಾಲಯದ ಕುಲಪತಿಗೆ ಸಂಬಂಧಿಕರೊಬ್ಬರನ್ನು ನೇಮಿಸುವಂತೆ ತಮ್ಮ ಕಚೇರಿಯಿಂದ ನಿರ್ದೇಶನ ನೀಡುತ್ತಿರುವುದು ಸಿ.ಎಂ ಗೆ ತಿಳಿದಿಲ್ಲ ಎಂದಾದರೆ, ಅವರು (ಸಿ.ಎಂ) ಎಷ್ಟು ಅಸಮರ್ಥರಾಗಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ' ಎಂದು ರಾಜ್ಯಪಾಲರು ತರಾಟೆಗೆ ತೆಗೆದುಕೊಂಡರು.
ವಿಶ್ವವಿದ್ಯಾಲಯಗಳಲ್ಲಿ 'ಶುದ್ಧೀಕರಣ ಕಾರ್ಯ' ನಡೆಯುತ್ತಿದೆಯೇ ಎಂಬ ಮಾತನ್ನು ತಳ್ಳಿ ಹಾಕಿದ ಅವರು, ಇದು ಶುದ್ಧೀಕರಣದ ಕೆಲಸವಲ್ಲ. ವಿಶ್ವವಿದ್ಯಾಲಯಗಳನ್ನು ಅವುಗಳ ಪ್ರಾಚೀನ ವೈಭವಕ್ಕೆ ಮರುಸ್ಥಾಪಿಸಬೇಕಾಗಿದೆ ಮತ್ತು ಸ್ವಜನಪಕ್ಷಪಾತದಿಂದ ಮುಕ್ತರಾಗಬೇಕು' ಎಂದು ಖಾನ್ ಹೇಳಿದರು.