ಕೊಲಂಬೊ: ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅವರು ಮಾತುಕತೆಗೆ ಆಹ್ವಾನಿಸಿರುವ ಹಿನ್ನೆಲೆಯಲ್ಲಿ ಪಕ್ಷದೊಳಗೆ ಚರ್ಚೆ ನಡೆಸಿದ ಶ್ರೀಲಂಕಾದ ತಮಿಳು ಅಲ್ಪಸಂಖ್ಯಾತ ಪಕ್ಷಗಳು, ಸಂಯುಕ್ತ ವ್ಯವಸ್ಥೆಗೆ ಒತ್ತು ಸೇರಿದಂತೆ ಮೂರು ಅಂಶಗಳ ಸೂತ್ರ ಮುಂದಿಡಲು ಒಪ್ಪಿಕೊಂಡಿವೆ ಎಂದು ತಮಿಳು ರಾಷ್ಟ್ರೀಯ ಮೈತ್ರಿಕೂಟದ (ಟಿಎನ್‌ಎ) ಮೂಲಗಳು ಶನಿವಾರ ತಿಳಿಸಿವೆ.
ಪೂರ್ವ ಮತ್ತು ಉತ್ತರದಲ್ಲಿ ನೆಲೆಸಿರುವ ದ್ವೀಪ ರಾಷ್ಟ್ರದ ಎಲ್ಲಾ ತಮಿಳು ರಾಜಕೀಯ ಪಕ್ಷಗಳು ಶುಕ್ರವಾರ 89 ವರ್ಷದ ಟಿಎನ್‌ಎ ನಾಯಕ ರಾಜವರೋಥಿಯಾಮ್ ಸಂಪಂತನ್ ಅವರ ನಿವಾಸದಲ್ಲಿ ಸಭೆ ಸೇರಿ ಚರ್ಚಿಸಿದವು.
ದೇಶದ ಅಲ್ಪಸಂಖ್ಯಾತ ಸಮುದಾಯಕ್ಕೆ ರಾಜಕೀಯ ಸ್ವಾಯತ್ತತೆಯ ದೀರ್ಘಕಾಲದ ಬೇಡಿಕೆ ಹಾಗೂ ಮುಂದಿನ ತಿಂಗಳು ನಡೆಯಲಿರುವ ಸರ್ವಪಕ್ಷ ಸಭೆಗೆ ಮುಂಚಿತವಾಗಿ ಸಂಯುಕ್ತ ವ್ಯವಸ್ಥೆಗೆ ಒತ್ತಾಯಿಸಲು ನಿರ್ಧರಿಸಿದವು.
ಪಕ್ಷದ ಸಭೆಯಲ್ಲಿ ನಿರ್ಧರಿಸಿದ ಸೂತ್ರದ ಪ್ರಕಾರ, ಹೊಸ ಸಂವಿಧಾನ ರಚಿಸುವಲ್ಲಿ ತಮಿಳು ಪ್ರದೇಶಗಳಿಗೆ ವಿಕೇಂದ್ರೀಕರಣ ಸೇರಿದಂತೆ ಸ್ಥಗಿತಗೊಂಡಿರುವ ಪ್ರಾಂತೀಯ ಕೌನ್ಸಿಲ್ ಚುನಾವಣೆಗಳನ್ನು ನಡೆಸುವ ಪ್ರಸ್ತಾಪವನ್ನು ಒಳಗೊಂಡಿದೆ. ಅಲ್ಲದೆ ತಮಿಳರಿಗೆ ಸೇರಿದ ಭೂಮಿ ಕಬಳಿಕೆ ಮಾಡುವುದನ್ನು ನಿಲ್ಲಿಸುವುದೂ ಸೇರಿದೆ.
ಮುಂದಿನ ವರ್ಷದ ಫೆ. 4ರೊಳಗೆ ತಮಿಳು ಜನಾಂಗೀಯ ಸಮಸ್ಯೆ ಕೊನೆಗೊಳಿಸುವ ಉದ್ದೇಶದಿಂದ ಎಲ್ಲಾ ರಾಜಕೀಯ ಪಕ್ಷಗಳನ್ನು ವಿಕ್ರಮಸಿಂಘೆ ಮಾತುಕತೆಗೆ ಆಹ್ವಾನಿಸಿದ್ದಾರೆ.
ಡಿ.11ರ ನಂತರ ಸಭೆ ನಡೆಸಲು ಸಿದ್ಧ. ದೀರ್ಘಕಾಲದ ಸಂಘರ್ಷ ಪರಿಹರಿಸಲು, ಬಹುಸಂಖ್ಯಾತ ಸಿಂಹಳೀಯರು ಮತ್ತು ತಮಿಳರ ನಡುವೆ ವಿಶ್ವಾಸ ಬೆಳೆಸುವುದು ಮುಖ್ಯ ಎಂದು ವಿಕ್ರಮಸಿಂಘೆ ಸಂಸತ್ತಿಗೆ ತಿಳಿಸಿದರು.
2015ರಲ್ಲಿ ವಿಕ್ರಮಸಿಂಘೆ ಅವರು ಪ್ರಧಾನಿಯಾಗಿದ್ದಾಗ ಟಿಎನ್‌ಎ ಹಿರಿಯ ನಾಯಕ ಸಂಪಂತನ್ ಅವರೊಂದಿಗೆ ರಾಜಿ ಪ್ರಕ್ರಿಯೆ ಪ್ರಾರಂಭಿಸಿದ್ದರು.