ನವದೆಹಲಿ : ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ, ಮತದಾರರ ಪಟ್ಟಿಯಲ್ಲಿ ಸೇರ್ಪಡೆ, ಕೇಂದ್ರ ಮತ್ತು ರಾಜ್ಯ ಸರಕಾರಿ ಹುದ್ದೆಗಳಿಗೆ ನೇಮಕ, ವಾಹನ ಚಾಲನಾ ಪರವಾನಿಗೆ ಮತ್ತು ಪಾಸ್‌ಪೋರ್ಟ್ ವಿತರಣೆ (driving licence, passport, voting right); ಹೀಗೆ ಜೀವನದ ಪ್ರತಿಯೊಂದು ರಂಗದಲ್ಲಿಯೂ ಜನನ ಪ್ರಮಾಣಪತ್ರವನ್ನು (Birth certificate) ಕಡ್ಡಾಯಗೊಳಿಸಲು ಕೇಂದ್ರ ಸರಕಾರವು ಉದ್ದೇಶಿಸಿದೆ.
ಇದಕ್ಕಾಗಿ ಜನನ ಮತ್ತು ಮರಣ ನೋಂದಣಿ (ಆರ್‌ಬಿಡಿ) ಕಾಯ್ದೆ,1969ಕ್ಕೆ ತಿದ್ದುಪಡಿ ತರಲು ಅದು ಸಜ್ಜಾಗಿದ್ದು,ಕರಡು ಮಸೂದೆಯೂ ಸಿದ್ಧವಾಗಿದೆ ಎಂದು thehindu.com ವರದಿ ಮಾಡಿದೆ.
ಕೇಂದ್ರೀಯ ಸಂಗ್ರಹಿತ ದತ್ತಾಂಶಗಳನ್ನು ವ್ಯಕ್ತಿಯ ಉಪಸ್ಥಿತಿಯ ಅಗತ್ಯವಿಲ್ಲದೆ ನೈಜ ಸಮಯದಲ್ಲಿ ನವೀಕರಿಸಲಾಗುತ್ತದೆ. ಇದರಿಂದ ವ್ಯಕ್ತಿಗೆ 18 ವರ್ಷಗಳು ತುಂಬಿದಾಗ ಮತ್ತು ಮರಣ ಹೊಂದಿದಾಗ ಮತದಾರರ ಪಟ್ಟಿಯಲ್ಲಿ ಅನುಕ್ರಮವಾಗಿ ಆತನ ಹೆಸರಿನ ಸೇರ್ಪಡೆ ಮತ್ತು ಅಳಿಸುವಿಕೆ ಸಾಧ್ಯವಾಗುತ್ತದೆ.
ಪ್ರಸ್ತಾವಿತ ಬದಲಾವಣೆಗಳಂತೆ, ಸಾವಿನ ಕಾರಣವನ್ನು ಉಲ್ಲೇಖಿಸಿ ಮರಣ ಪ್ರಮಾಣಪತ್ರದ ಪ್ರತಿಯನ್ನು ಮೃತನ ಸಂಬಂಧಿಯ ಜೊತೆಗೆ ಸ್ಥಳೀಯ ನೋಂದಣಾಧಿಕಾರಿಗಳಿಗೂ ಒದಗಿಸುವುದು ಆಸ್ಪತ್ರೆಗಳು ಮತ್ತು ವೈದ್ಯಕೀಯ ಸಂಸ್ಥೆಗಳಿಗೆ ಕಡ್ಡಾಯವಾಗಲಿದೆ.
ಆರ್‌ಬಿಡಿ ಕಾಯ್ದೆ, 1969ರಡಿ ಜನನ ಮತ್ತು ಮರಣ ನೋಂದಣಿ ಈಗಾಗಲೇ ಕಡ್ಡಾಯವಾಗಿದ್ದು, ಅದರ ಉಲ್ಲಂಘನೆಯು ದಂಡನೀಯ ಅಪರಾಧವಾಗಿದೆ. ಆದಾಗ್ಯೂ ಶಾಲೆಗಳಲ್ಲಿ ಪ್ರವೇಶ ಮತ್ತು ವಿವಾಹಗಳ ನೋಂದಣಿಯಂತಹ ಮೂಲಭೂತ ಸೇವೆಗಳನ್ನು ಪಡೆಯಲು ಜನನ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸುವ ಮೂಲಕ ಅನುಸರಣೆಯಲ್ಲಿ ಸುಧಾರಣೆಯನ್ನು ತರುವುದು ಸರಕಾರದ ಉದ್ದೇಶವಾಗಿದೆ.
ಸ್ಥಳೀಯ ನೋಂದಣಾಧಿಕಾರಿಗಳು ನೀಡುವ ಜನನ ಪ್ರಮಾಣಪತ್ರವನ್ನು ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ, ಚಾಲನಾ ಪರವಾನಿಗೆ ನೀಡಿಕೆ, ಮತದಾರರ ಪಟ್ಟಿಯ ಸಿದ್ಧತೆ, ವಿವಾಹ ನೋಂದಣಿ, ಕೇಂದ್ರ ಮತ್ತು ರಾಜ್ಯ ಸರಕಾರಿ ಹುದ್ದೆಗಳು, ಸ್ಥಳೀಯ ಸಂಸ್ಥೆಗಳು ಮತ್ತು ಸಾರ್ವಜನಿಕ ಕ್ಷೇತ್ರದ ಉದ್ಯಮಗಳು,ಶಾಸನಬದ್ಧ ಸಂಸ್ಥೆಗಳು, ಕೇಂದ್ರ ಮತ್ತು ರಾಜ್ಯ ಸರಕಾರಗಳ ಅಡಿ ಸ್ವಾಯತ್ತ ಸಂಸ್ಥೆಗಳಲ್ಲಿ ನೇಮಕಾತಿಗಳು, ಪಾಸ್‌ಪೋರ್ಟ್ ವಿತರಣೆ ಮತ್ತು ಅಧಿಸೂಚಿಸಲಾದ ಇತರ ಪ್ರಕರಣಗಳಲ್ಲಿ ತಿದ್ದುಪಡಿಯ ದಿನಾಂಕದಂದು ಅಥವಾ ನಂತರ ಜನಿಸಿದ ವ್ಯಕ್ತಿಯ ಜನನ ದಿನಾಂಕ ಮತ್ತು ಸ್ಥಳವನ್ನು ಸಾಬೀತುಪಡಿಸಲು ಬಳಸಲಾಗುತ್ತದೆ ಎಂದು ಗೃಹ ವ್ಯವಹಾರಗಳ ಸಚಿವಾಲಯವು ಪ್ರಸ್ತಾವಿಸಿರುವ ತಿದ್ದುಪಡಿ ಮಸೂದೆಯಲ್ಲಿ ಹೇಳಲಾಗಿದೆ.
ಡಿ.7ರಿಂದ ಆರಂಭಗೊಳ್ಳಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಸೂದೆಯು ಮಂಡನೆಗೊಳ್ಳುವ ಸಾಧ್ಯತೆಯಿದೆ. ಅಧಿವೇಶನವು ಕೇವಲ 17 ಬೈಠಕ್‌ಗಳನ್ನು ಒಳಗೊಂಡಿರುವುದರಿಂದ ಮುಂದಿನ ಅಧಿವೇಶನದಲ್ಲಿ ಮಸೂದೆಯ ಮೇಲೆ ಚರ್ಚೆಗಳನ್ನು ಕೈಗೆತ್ತಿಕೊಳ್ಳಬಹುದು ಎಂದು ಬಲ್ಲ ಮೂಲಗಳು ತಿಳಿಸಿವೆ.
ನಾಗರಿಕ ನೋಂದಣಿ ವ್ಯವಸ್ಥೆ (ಸಿಆರ್‌ಎಸ್) ವರದಿಯಂತೆ ದೇಶದಲ್ಲಿ 2010ರಲ್ಲಿ ಶೇ.82ರಷ್ಟಿದ್ದ ಜನನಗಳ ನೋಂದಣಿ ಮಟ್ಟವು 2019ರಲ್ಲಿ ಶೇ.92.7ಕ್ಕೆ ಏರಿಕೆಯಾಗಿದೆ. ಅದೇ ರೀತಿ ಶೇ.66.9ರಷ್ಟಿದ್ದ ಮರಣಗಳ ನೋಂದಣಿ ಮಟ್ಟವು ಶೇ.92ಕ್ಕೆ ಏರಿಕೆಯಾಗಿದೆ. ಸಿಆರ್‌ಎಸ್ ಭಾರತೀಯ ಮಹಾ ನೋಂದಣಾಧಿಕಾರಿಗಳ ನಿಯಂತ್ರಣದಲ್ಲಿರುವ ಜನನ ಮತ್ತು ಮರಣಗಳ ನೋಂದಣಿಗಾಗಿರುವ ಆನ್‌ಲೈನ್ ವ್ಯವಸ್ಥೆಯಾಗಿದೆ.
ಪ್ರಸ್ತಾವಿತ ತಿದ್ದುಪಡಿಗಳು ಜಾರಿಗೊಂಡರೆ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್)ಯನ್ನು ನವೀಕರಿಸಲು ಕೇಂದ್ರವು ದತ್ತಾಂಶಗಳನ್ನು ಬಳಸಬಹುದು. 2010ರಲ್ಲಿ ಮೊದಲ ಬಾರಿಗೆ ಸಿದ್ಧಗೊಳಿಸಲಾಗಿದ್ದ ಎನ್‌ಪಿಆರ್‌ನ್ನು 2015ರಲ್ಲಿ ಮನೆ ಮನೆ ಎಣಿಕೆಯ ಮೂಲಕ ಪರಿಷ್ಕರಿಸಲಾಗಿತ್ತು. ಎನ್‌ಪಿಆರ್ ಈಗಾಗಲೇ 119 ಕೋಟಿ ನಾಗರಿಕರ ದತ್ತಾಂಶ ಸಂಚಯವನ್ನು ಹೊಂದಿದ್ದು,2003ರ ಪೌರತ್ವ ನಿಯಮಗಳಡಿ ಅದು ಎನ್‌ಸಿಆರ್ ಸಿದ್ಧಗೊಳಿಸುವಲ್ಲಿ ಮೊದಲ ಹೆಜ್ಜೆಯಾಗಿದೆ.