ನವದೆಹಲಿ: ದಾಂಪತ್ಯ ಕಲಹ ಮತ್ತು ಜಾಮೀನಿಗೆ ಸಂಬಂಧಿಸಿದ ತಲಾ ಹತ್ತು ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ನ ಎಲ್ಲಾ 13 ನ್ಯಾಯಪೀಠಗಳು ಪ್ರತಿದಿನ ವಿಚಾರಣೆ ನಡೆಸಲಿವೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಶುಕ್ರವಾರ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ಸಭೆಯಲ್ಲಿ ಈ ತಿರ್ಮಾನ ಕೈಗೊಳ್ಳಲಾಗಿದೆ ಎಂದೂ ಅವರು ಹೇಳಿದ್ದಾರೆ.
ಚಳಿಗಾಲದ ರಜೆಗಿಂತ ಮೊದಲು ಈ ವಿಷಯಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ವಿಲೇವಾರಿ ಮಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಜಾಮೀನು ವಿಚಾರವು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿರುವುದರಿಂದ ಅವುಗಳಿಗೆ ಪ್ರಾಮುಖ್ಯತೆ ನೀಡಲಾಗುವುದು ಎಂದೂ ಅವರು ವಿವರಿಸಿದ್ದಾರೆ.
ಪ್ರತಿದಿನ ಈ ಪ್ರಕರಣಗಳ ವಿಚಾರಣೆ ನಡೆಸಿದ ಬಳಿಕ ನ್ಯಾಯಪೀಠಗಳು ಸಾಮಾನ್ಯ ಪ್ರಕರಣಗಳ ವಿಚಾರಣೆ ನಡೆಸಲಿವೆ ಎಂದೂ ಚಂದ್ರಚೂಡ್ ಅವರು ಸ್ಪಷ್ಟಪಡಿಸಿದ್ದಾರೆ.
ವೈವಾಹಿಕ ಪ್ರಕರಣಗಳನ್ನು ತಮ್ಮ ಇಚ್ಛೆಯ ಸ್ಥಳಗಳಿಗೆ ವರ್ಗಾಹಿಸಬೇಕೆಂದು ಕೋರಿ ಸಲ್ಲಿಕೆಯಾಗಿರುವ 3,000 ಅರ್ಜಿಗಳ ವಿಚಾರಣೆ ಈವರೆಗೆ ಬಾಕಿ ಉಳಿದಿವೆ ಎಂದು ನ್ಯಾಯಪೀಠ ಹೇಳಿದೆ.