ಪ್ಲಾಸ್ಟಿಕ್ ನಿರ್ವಹಣೆಗಾಗಿ ಕಾಸರಗೋಡು ನಗರಸಭೆಯಿಂದ ಬಾಟಲಿ ಬೂತ್: ಯೋಜನೆ ಜಾರಿಯೊಂದಿಗೆ ತ್ಯಾಜ್ಯ ನಿರ್ವಹಣೆಗೂ ಬೇಕಾಗಿದೆ ಆದ್ಯತೆ
0
ನವೆಂಬರ್ 30, 2022
ಕಾಸರಗೋಡು: ನಗರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ಧೋರಣೆಯೊಂದಿಗೆ ಕೈಗೊಳ್ಳುತ್ತಿರುವ ಅಭಿಯಾನದ ಅಂಗವಾಗಿ ಕಾಸರಗೋಡು ನಗರಸಭೆ ನಗರದ ವಿವಿಧೆಡೆ ಪ್ಲಾಸ್ಟಿಕ್ ಬೂತ್ ಅಳವಡಿಸಲಾರಂಭಿಸಿದೆ.
ಪ್ಲಾಸ್ಟಿಕ್ ಕೈಚೀಲಗಳು, ಇದರಲ್ಲೂ ಮುಖ್ಯವಾಗಿ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿಗಳು ಸೇರಿದಂತೆ ಪ್ಲಾಸ್ಟಿಕ್ ತ್ಯಾಜ್ಯ ನಗರದೆಲ್ಲೆಡೆ ತುಂಬಿಕೊಳ್ಳುತ್ತಿದ್ದು, ಇವುಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಒಂದೇಕಡೆ ದಾಸ್ತಾನುಮಾಡುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ಬೂತ್ ಅಳವಡಿಕೆ ಕಾರ್ಯ ಹಮ್ಮಿಕೊಳ್ಳಲಾಗಿದೆ. ಬಾಟಲಿ ಆಕೃತಿಯಲ್ಲಿ ಈ ಪ್ಲಾಸ್ಟಿಕ್ ಬೂತ್‍ಗಳನ್ನು ನಿರ್ಮಿಸಲಾಗಿದ್ದು, ಜನಾಕರ್ಷಣೆಗೂ ಕಾರಣವಾಗುತ್ತಿz
. ಮುಖ್ಯವಾಗಿ ನೀರಿನ ಬಾಟಲಿ, ತಂಪು ಪಾನೀಯ ಬಾಟಲಿ ಸೇರಿದಂತೆ ವಿವಿಧ ಪಾನೀಯಗಳ ಪ್ಲಾಸ್ಟಿಕ್ ಬಾಟಲಿಗಳನ್ನು ಮಾತ್ರ ಈ ಬೂತ್‍ಗಳಲ್ಲಿ ದಾಸ್ತಾನುಗೊಳಿಸಬೇಕಾಗಿದೆ. ಪ್ರಸಕ್ತ ಕಾಸರಗೋಡು ನಗರದಲ್ಲಿ ಹಳೇ ಬಸ್‍ನಿಲ್ದಾಣ, ಹೊಸ ಬಸ್‍ನಿಲ್ದಾಣ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ಕಾಸರಗೋಡು ನಗರಸಭಾ ಕಚೇರಿ ವಠಾರ, ಸಂಧ್ಯಾರಾಗ ತೆರೆದ ಸಭಾಂಗಣ, ಕಸಬಾ ಬೀಚ್. ಲೈಟ್‍ಹೌಸ್, ತಾಯಲಂಗಾಡಿ ಸೀವ್ಯೂ ಪಾರ್ಕ್ ಮುಂತಾದೆಡೆ ಬಾಟಲಿ ಸಂಗ್ರಹಣಾ ಬೂತ್ ಸ್ಥಾಪಿಸಲಾಗಿದೆ.
ಗಬ್ಬು ನಾರುತ್ತಿರುವ ಪ್ಲಾಸ್ಟಿಕ್ ಸಂಗ್ರಹ ಕೇಂದ್ರ:
ಜಿಲ್ಲೆಯ ನಾನಾ ಕಡೆ ಸ್ಥಳೀಯಾಡಳಿತ ಸಂಸ್ಥೆ ವತಿಯಿಂದ ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯ ಸಂಗ್ರಹಕ್ಕಾಗಿ ಅಳವಡಿಸಲಾಗಿರುವ ಎಂ.ಸಿ.ಎಫ್(ಮೆಟೀರಿಯಲ್ ಕಲೆಕ್ಷನ್ ಫೆಸಿಲಿಟೀಸ್) ನಿರ್ವಹಣೆಯಿಲ್ಲದೆ ಗಬ್ಬು ನಾರುತ್ತಿದೆ. ರಸ್ತೆಬದಿ ಹಲವಾರು ಎಂ.ಸಿ.ಎಫ್ ಕೇಂದ್ರಗಳನ್ನು ಲಕ್ಷಾಂತರ ರೂ. ವೆಚ್ಚದಲ್ಲಿ ಅಳವಡಿಸಲಾಗಿದ್ದು, ಇವುಗಳಲ್ಲಿ ತುಂಬಿಕೊಳ್ಳುವ ಪ್ಲಾಸ್ಟಿಕ್ ತ್ಯಾಜ್ಯ ತೆರವುಗೊಳಿಸದೆ, ಸಂಗ್ರಹಕೇಂದ್ರದ ಸುತ್ತು ಹರಡಿಕೊಳ್ಳುವಂತಾಗಿದೆ. ಮಣ್ಣಿನೊಂದಿಗೆ ಬೆರೆತುಕೊಳ್ಳದ ಪ್ಲಾಸ್ಟಿಕ್, ಗಾಜು, ಥರ್ಮೋಕೋಲ್, ಇ-ವೇಸ್ಟ್ ಮುಂತಾದುವುಗಳನ್ನು ಸಂಗ್ರಹಿಸಿ ಈ ಎಂ.ಸಿ.ಎಫ್‍ನೊಳಗೆ ಅಳವಡಿಸಬೇಕೆಂಬ ನಿಬಂಧನೆಯಿದ್ದರೂ, ಇದರಲ್ಲಿ ಘನ-ದ್ರವ ತ್ಯಾಜ್ಯವನ್ನೂ ಸುರಿಯಲಾಗುತ್ತಿದೆ. ಸಕಾಲಕ್ಕೆ ತ್ಯಾಜ್ಯ ತೆರವುಗೊಳಿಸುವಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳೂ ವಿಫಲವಾಗಿದ್ದು, ಒಟ್ಟು ಯೋಜನೆ ಬುಡಮೇಲಾಗುವಂತಾಗಿದೆ. ಸರ್ಕಾರ ಲಕ್ಷಾಂತರ ರೂ. ವೆಚ್ಚದಲ್ಲಿ ಇಂತಹ ಯೋಜನೆ ಜಾರಿಗೊಳಿಸುತ್ತಿದ್ದರೂ, ಸಮರ್ಪಕ ನಿರ್ವಹಣೆಯಿಲ್ಲದೆ ಯೋಜನೆ ಯಶಸ್ವಿಯಾಗುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿದೆ.
Tags