ಕೊಚ್ಚಿ: ಪ್ರಾಣಿಗಳಿಗೆ ಸಂಬಂಧಪಟ್ಟ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ. ಅವುಗಳಲ್ಲಿ ಕೆಲವೊಂದು ವಿಡಿಯೋಗಳು ವಿಶೇಷ ಕಾರಣದಿಂದಾಗಿ ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಅದೇ ಸಾಲಿಗೆ ಇದೀಗ ಆನೆಯ ವಿಡಿಯೋವೊಂದು ಸೇರಿಕೊಂಡಿದೆ.
ಸಣ್ಣ ವಿಡಿಯೋ ತುಣುಕಿನಲ್ಲಿ ಆನೆ ಮತ್ತು ಮಾವುತನ ನಡುವಿನ ಭಾವನಾತ್ಮಕ ಬಂಧವನ್ನು ಕಣ್ತುಂಬಿಕೊಳ್ಳಬಹುದಾಗಿದೆ. kerala_elephants ಹೆಸರಿನ ಇನ್ಸ್ಟಾಗ್ರಾಂ ಪೇಜ್ನಲ್ಲಿ ವಿಡಿಯೋ ಪೊಸ್ಟ್ ಮಾಡಲಾಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಆನೆಯು ತನ್ನ ದಣಿದ ಮಾವುತನನ್ನು ಮುದ್ದಿಸುವುದು ಮತ್ತು ಸಂತೈಸಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಆನೆ ಮತ್ತು ಅದರ ಮಾವುತನ ನಡುವಿನ ಸಂಬಂಧವು ಅನನ್ಯ ಮತ್ತು ಅಮೂಲ್ಯವಾದುದು. ಇಂತಹ ಸಂಬಂಧವನ್ನು ನೈತಿಕ ರೀತಿಯಲ್ಲಿ ಹಾಗೂ ಸರಿಯಾದ ಮಾರ್ಗದಲ್ಲಿ ಪೋಷಿಸಿದಾಗ ಅದು ಗೌರವ ಮತ್ತು ಪ್ರೀತಿಯ ಸಂಬಂಧವಾಗುತ್ತದೆ ಮತ್ತು ಶೀಘ್ರದಲ್ಲೇ ಆಳವಾದ ಬಂಧವಾಗಿ ಬದಲಾಗುತ್ತದೆ ಎಂದು ವಿಡಿಯೋಗೆ ಅಡಿಬರಹವನ್ನು ನೀಡಲಾಗಿದೆ.
ಇದುವರೆಗೂ ಈ ವಿಡಿಯೋಗೆ 37 ಸಾವಿರಕ್ಕೂ ಅಧಿಕ ಲೈಕ್ಸ್ಗಳು ಹರಿದುಬಂದಿವೆ. ವಿಡಿಯೋ ನೋಡಿ ನೆಟ್ಟಿಗರು ಸಹ ಭಾವುಕರಾಗಿ ಕಾಮೆಂಟ್ಗಳ ಸುರಿಮಳೆಗೈದಿದ್ದಾರೆ. ಇತ್ತೀಚೆಗೆ ನಾನು ನೋಡಿದ ವಿಡಿಯೋಗಳಲ್ಲಿ ಅದ್ಭುತ ವಿಡಿಯೋ ಎಂದಿದ್ದಾರೆ.
ಆನೆಯ ಭಾವನಾತ್ಮಕ ಭಾಗದ ಆಧಾರದ ಮೇಲೆ ವಿಡಿಯೋ ವೈರಲ್ ಆಗುತ್ತಿದೆಯಾದರೂ, ಇದು ನಿಜವಾಗಿಯೂ ಮಾವುತ ವೀಕ್ಷಿಸುತ್ತಿರುವ ಮೊಬೈಲ್ ಪರದೆಯನ್ನು ಇಣುಕಿ ನೋಡಲು ಆನೆ ಪ್ರಯತ್ನಿಸುತ್ತಿದೆ ಎಂದು ಕೆಲವರು ತಿಳಿಸಿದ್ದಾರೆ. ಆದರೆ, ಇದರಲ್ಲಿ ಯಾವುದು ನಿಜ ಎಂದು ನಮಗೆ ಖಚಿತವಿಲ್ಲ. ಆದರೆ ಆನೆಗಳು ವಿಶ್ವದ ಅತ್ಯಂತ ಮುಗ್ಧ ಮತ್ತು ಪ್ರೀತಿಯ ಪ್ರಾಣಿಗಳು ಎಂಬುದು ಸ್ಪಷ್ಟವಾಗಿದೆ. ಅವು ಅತ್ಯಂತ ಮೃದುವಾದ ಹೃದಯವನ್ನು ಹೊಂದಿರುವ ದೊಡ್ಡ ಪ್ರಾಣಿಗಳಾಗಿವೆ.