ನವದೆಹಲಿ: ದೈತ್ಯ ಐಟಿ ಕಂಪೆನಿಗಳು ತನ್ನ ಉದ್ಯೋಗಿಗಳನ್ನು ದೊಡ್ಡ ಪ್ರಮಾಣದಲ್ಲಿ ವಜಾ ಮಾಡುವ ಕೆಲಸಕ್ಕೆ ಮುಂದಾಗಿವೆ. ವಿಶ್ವದಾದ್ಯಂತ ಅನೇಕ ಕಂಪೆನಿ ನೌಕರರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಲಕ್ಷಾಂತರ ಸಂಖ್ಯೆಯಲ್ಲಿ ಕೆಲಸ ಕಳೆದುಕೊಳ್ಳುತ್ತಿದ್ದು, ಇದರಿಂದ ನಿರುದ್ಯೋಗದ ಪ್ರಮಾಣವೂ ಹೆಚ್ಚಾಗುತ್ತಿದೆ.
ಅಮೆಜಾನ್, ಎಚ್ಪಿ, ಟ್ವಿಟರ್, ಮೇಟಾ, ಮೈಕ್ರೋಸಾಫ್ಟ್, ಸ್ನ್ಯಾಪ್ಚ್ಯಾಟ್ ಮುಂತಾದ ದೈತ್ಯ ಸಂಸ್ಥೆಗಳು ತಮ್ಮ ಉದ್ಯೋಗಿಗಳನ್ನು ವಜಾ ಮಾಡುತ್ತಿವೆ. ಹೆಚ್ಚುತ್ತಿರುವ ಆರ್ಥಿಕ ಹೊರೆಯನ್ನು ತಗ್ಗಿಸುವ ಸಲುವಾಗಿ ಕಂಪೆನಿಗಳು ಉದ್ಯೋಗ ಕಡಿತಕ್ಕೆ ಮುಂದಾಗಿವೆ. ಈ ನಡೆ ನೌಕರರ ಚಿಂತೆಗೆ ಕಾರಣವಾಗಿದೆ.
ಗೂಗಲ್ನ ಮಾತೃಸಂಸ್ಥೆ ಅಲ್ಫಾಬೆಟ್ ತನ್ನ 10 ಸಾವಿರ ಮಂದಿ ಉದ್ಯೋಗಿಗಳನ್ನು ವಜಾಗೊಳಿಸಲಿದೆ ಎಂಬ ಸುದ್ದಿ ಹೊರಬಿದ್ದಿದೆ. ಆರ್ಥಿಕ ಹೊರೆ ನಿಭಾಯಿಸುವುದಕ್ಕಾಗಿ ಕಂಪನಿ ಈ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಕೊಟ್ಟಿರುವ ಕೆಲಸವನ್ನು ಪೂರ್ಣಪ್ರಮಾಣದಲ್ಲಿ ಮಾಡಲು ಸಾಧ್ಯವಾಗದೇ ಇರುವ ನೌಕರರನ್ನು ಗುರುತಿಸಲು ಕಂಪೆನಿ ತನ್ನ ಮ್ಯಾನೇಜರ್ಗಳಿಗೆ ಈಗಾಗಲೇ ತಿಳಿಸಿದೆ. ಇದರಿಂದ ಅಲ್ಫಾಬೆಟ್ ಸಂಸ್ಥೆಯಿಂದ ಒಟ್ಟು ಉದ್ಯೋಗಿಗಳ, ಶೇ.6ರಷ್ಟು ಮಂದಿ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಮೇಟಾ ಸಂಸ್ಥೆ, ಫೇಸ್ಬುಕ್ನಿಂದ 11 ಸಾವಿರಕ್ಕಿಂತಲೂ ಅಧಿಕ ಮಂದಿ ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಹೇಳಿಕೊಂಡಿತ್ತು. ಇದರಿಂದ ಅಂದಾಜು 1 ಸಾವಿರದಷ್ಟು ಭಾರತೀಯರು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಟ್ವಿಟರ್ ಸಂಸ್ಥೆ ಎಲಾನ್ ಮಸ್ಕ್ ಪಾಲಾಗುತ್ತಿದ್ದಂತೆ, ಅಲ್ಲೂ ಉದ್ಯೋಗ ಕಡಿತವಾಗುತ್ತಿದೆ. ಈಗಾಗಲೇ ಟ್ವಿಟರ್ನಿಂದ ಅರ್ಧದಷ್ಟು ಉದ್ಯೋಗಿಗಳು ಹೊರಬಂದಿದ್ದಾರೆ. ಮೂಲಗಳ ಪ್ರಕಾರ ಟ್ವಿಟರ್ ಸಂಸ್ಥೆ ಭಾರತದ ಮಾರ್ಕೆಟಿಂಗ್ ಮತ್ತು ಸಂವಹನ ತಂಡವನ್ನು ಸಂಪೂರ್ಣ ವಜಾ ಮಾಡಿದೆ ಎಂದು ವರದಿಯಾಗಿದೆ. ದೈತ್ಯ ಮೈಕ್ರೋಸಾಫ್ಟ್ ಸಂಸ್ಥೆಯ ಆದಾಯ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದ್ದು, ಇಲ್ಲೂ ಉದ್ಯೋಗ ಕಡಿತ ನಡೆಯುತ್ತಿದೆ. ಇಂಟೆಂಲ್ ಸಂಸ್ಥೆ ಈಗಾಗಲೇ ಶೇ.20 ರಷ್ಟು ಉದ್ಯೋಗಿಗಳನ್ನು ಕಡಿತಗೊಳಿಸಲು ನಿರ್ಧರಿಸಿಕೊಂಡಿದೆ.
ದೈತ್ಯ ಕಂಪೆನಿಗಳಿಗೆ ಸದ್ಯ ಪ್ರತಿ ತಿಂಗಳು ವೇತನ ನೀಡುವುದೇ ಹೊರೆಯಾಗಿ ಪರಿಣಮಿಸಿದೆ. ತಿಂಗಳ ವೇತನದ ಜತೆಗೆ ಉದ್ಯೋಗಿಗಳಿಗೆ ಅನೇಕ ಸೌಲಭ್ಯಗಳನ್ನು ಸಹಿತ ನೀಡಬೇಕಾಗುತ್ತದೆ. ಈ ಬಾರಿ ಅನೇಕ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ಬೋನಸ್ ನೀಡಿಲ್ಲ. ಜತೆಗೆ ತಮ್ಮ ಮಾರುಕಟ್ಟೆ ವಿಸ್ತರಿಸಿಕೊಳ್ಳಲು ಜಾಹೀರಾತು ನೀಡಬೇಕಾಗುತ್ತದೆ. ಇದಕ್ಕಾಗಿ ಅಧಿಕ ಹಣ ವಿನಿಯೋಗಿಸಬೇಕಾಗುತ್ತದೆ. ಇದೀಗ ಆರ್ಥಿಕ ವೆಚ್ಚವನ್ನು ಕಡಿಮೆ ಮಾಡಲು, ಉದ್ಯೋಗ ಕಡಿತದ ಜತೆಗೆ ಕಡಿಮೆ ಜಾಹೀರಾತು, ವಿವಿಧ ಸೌಲಭ್ಯ ಕಡಿತ ಮುಂತಾದ ಕ್ರಮ ವಹಿಸಲು ಅನೇಕ ಕಂಪೆನಿಗಳು ಮುಂದಾಗಿವೆ.
ಲಕ್ಷಾಂತರ ಸಂಖ್ಯೆಯಲ್ಲಿ ಉದ್ಯೋಗ ಕಡಿತದಿಂದ ಭಾರತ ಮತ್ತು ಭಾರತದ ಉದ್ಯೋಗಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ತಜ್ಞರ ಪ್ರಕಾರ ಅನೇಕ ಸಂಸ್ಥೆಗಳಿಗೆ ಜಾಗತಿಕವಾಗಿ ಆದಾಯ ಗಳಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಉದ್ಯೋಗ ಕಡಿತ ಮಾಡಿ, ಸೀಮಿತ ಖರ್ಚಿನೊಂದಿಗೆ ಮುಂದುವರಿಯಲು ಕಂಪೆನಿಗಳು ನಿರ್ಧರಿಸಿವೆ. ಮುಂದಿನ ದಿನಗಳಲ್ಲಿ ಆದಾಯದ ವೇಗ ಹೆಚ್ಚಾದಂತೆ ಮತ್ತೆ ಉದ್ಯೋಗಿಗಳ ನೇಮಕಾತಿ ನಡೆಸುತ್ತವೆ ಎಂದು ತಜ್ಞರು ಹೇಳುತ್ತಾರೆ.
ಜಾಗತಿಕವಾಗಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದು, ಅಧಿಕ ಸಂಖ್ಯೆಯಲ್ಲಿ ಉದ್ಯೋಗಿಗಳು ವಜಾಗೊಳ್ಳುತ್ತಿರುವುದಕ್ಕೆ ಬಹುಮುಖ್ಯ ಕಾರಣ. ಹೀಗಾಗಿ ಉದ್ಯೋಗಿಗಳು ಮುಂದಿನ ದಿನಗಳಲ್ಲಿ ಹೊಸ ಉದ್ಯೋಗಕ್ಕೆ ಸೇರುವಾಗ ಸಮರ್ಥವಾಗಿ ಮುನ್ನಡೆಯುತ್ತಿರುವಂತಹ ಕಂಪೆನಿಗಳನ್ನು ಹುಡಕಿ ಉದ್ಯೋಗಕ್ಕೆ ಸೇರಬೇಕು ಎಂಬುವುದು ತಜ್ಞರ ಅಭಿಪ್ರಾಯ.