ಮಂಜೇಶ್ವರ: ವಿವಿಧತೆಯಲ್ಲಿ ಏಕತೆ ಎಂಬ ಭಾರತದಲ್ಲಿ ಬಹುತ್ವದ ಅತ್ಯುನ್ನತ ಮೌಲ್ಯವನ್ನು ಪ್ರತಿಯೊಬ್ಬರೂ ಎತ್ತಿ ಹಿಡಿಯಬೇಕು ಎಂದು ಬಂದರು ವಸ್ತು ಸಂಗ್ರಹಾಲಯ, ಪುರಾತತ್ವ ಮತ್ತು ಇತಿಆಸ ಇಲಾಖೆ ಸಚಿವ ಅಹ್ಮದ್ ದೇವರಕೋವಿಲ್ ಹೇಳಿದರು.
ಅವರು ಹೊಸಂಗಡಿ ದುರ್ಗಿಪಳ್ಳದಲ್ಲಿ ಮಂಗಳವಾರ ಕೇರಳ ತುಳು ಅಕಾಡೆಮಿಯ ನೂತನ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಭಾರತದ ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ಮೌಲ್ಯಗಳನ್ನು ವ್ಯವಸ್ಥಿತವಾಗಿ ನಾಶಪಡಿಸುವ ಷಡ್ಯಂತ್ರಗಳು ಹಲವು ಕಡೆ ನಡೆಯುತ್ತಿವೆ. ಭಾರತದ ಶ್ರೇಷ್ಠ ಕಲ್ಪನೆಯನ್ನು ಅಳವಡಿಸಿಕೊಳ್ಳುವುದು ಇಂದು ಪ್ರತಿಯೊಬ್ಬ ಭಾರತೀಯನೂ ಮಾಡಬಹುದಾದ ಶ್ರೇಷ್ಠ ಸೇವೆಯಾಗಿದೆ. ಭಾರತದ ಬಹುತ್ವವನ್ನು ರಕ್ಷಿಸುವ ಮತ್ತು ಜಾತ್ಯತೀತತೆಯನ್ನು ಮೂಲಭೂತ ತತ್ತ್ವವೆಂದು ಗುರುತಿಸುವ ಸಂವಿಧಾನವನ್ನು ಕಿತ್ತೊಗೆಯಲು ಹಲವು ಕಡೆಗಳಿಂದ ಉದ್ದೇಶಪೂರ್ವಕ ನಡೆ ನಡೆಯುತ್ತಿದೆ. ಜಾತ್ಯತೀತ ಭಾರತವನ್ನು ಕೆಲವು ಶಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ವಿರೂಪಗೊಳಿಸುತ್ತಿವೆ. ಅಂತಹ ಶಕ್ತಿಗಳು ಈ ಗುರಿಯನ್ನು ಸಾಧಿಸಲು ಅನುಕೂಲಕರವಾದ ಪರಿಸ್ಥಿತಿಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತವೆ. ಬಹುಭಾಷೆಗಳ ನಾಡು ಕಾಸರಗೋಡು ಭವ್ಯ ಭಾರತ ರೂಪಿಸಿದ ಬಹುತ್ತ್ವದ ದ್ಯೋತಕ ಎಂಬುದನ್ನು ನಿಸ್ಸಂದೇಹವಾಗಿ ಹೇಳಬಹುದು ಎಂದರು.
ಕೇರಳ ತುಳು ಅಕಾಡೆಮಿಯ ನೂತನ ಅಧ್ಯಕ್ಷ ಕೆ.ಆರ್.ಜಯಾನಂದ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎ.ಕೆ.ಎಂ. ಅಶ್ರಫ್, ಮೀಂಜ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಂದರಿ ಆರ್.ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ. ಕಮಲಾಕ್ಷಿ, ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯೆ ಅಶ್ವಿನಿ ಪಜ್ವ, ಮೀಂಜ ಗ್ರಾಮ ಪಂಚಾಯತಿ ಸದಸ್ಯೆ ರೇಖಾ ಶರತ್, ಕನ್ನಡ ತುಳು ಲೇಖಕಿ ರಾಜಶ್ರೀ ಟಿ ರೈ ಪೆರ್ಲ, ಬಿ.ವಿ.ರಾಜನ್, ಕೆ.ಎಸ್.ಫಕ್ರುದ್ದೀನ್, ಟಿ.ಎ.ಮೂಸಾ, ಹರ್ಷದ್ ವರ್ಕಾಡಿ, ಬಾಲಕೃಷ್ಣ ಶೆಟ್ಟಿ, ರಾಘವ ಚೇರಾಲ್, ಅಹ್ಮದಲಿ ಮೊಗ್ರಾಲ್, ಹಮೀದ್ ಪೆರಿಂಗಡಿ ಮೊದಲಾದವರು ಮಾತನಾಡಿದರು. ನಿಕಟಪೂರ್ವ ಅಧ್ಯಕ್ಷ ಉಮೇಶ್ ಎಂ.ಸಾಲಿಯನ್ ಸ್ವಾಗತಿಸಿ, ಎ. ರವೀಂದ್ರ ವಂದಿಸಿದರು.
ತುಳು ಅಕಾಡೆಮಿ ನೂತನ ಆಡಳಿತ ಮಂಡಳಿ:
ಕೆ.ಆರ್.ಜಯಾನಂದ ಅಧ್ಯಕ್ಷರಾಗಿ ಕಾರ್ಯದರ್ಶಿ ಹಾಗೂ ಮೂವರು ಪದನಿಮಿತ್ತ ಸದಸ್ಯರು ಸೇರಿದಂತೆ 17 ಸದಸ್ಯರ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡಿತು. ಕಾಸರಗೋಡು ಸಹಕಾರಿ ಸಹಾಯಕ ನಿಬಂಧಕ ಎ.ರವೀಂದ್ರ ಕಾರ್ಯದರ್ಶಿಯಾಗಿದ್ದಾರೆ. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್, ಸಂಸದ ರಾಜಮೋಹನ್ ಉಣ್ಣಿತ್ತಾನ್ ಮತ್ತು ಶಾಸಕ ಎಕೆಎಂ ಅಶ್ರಫ್ ಅಧಿಕೃತ ಸದಸ್ಯರು. ನ್ಯಾಯವಾದಿ.ಜಿ.ಚಂದ್ರಮೋಹನ್, ಕೃಷ್ಣವೇಣಿ ಟೀಚರ್, ಜೋಸೆಫ್ ಕ್ರಾಸ್ತಾ, ಸಿ.ಕೆ.ಅಜಿತ್ ಚಿಪ್ಪಾರ್, ಉದಯ ಸಾರಂಗ್ ಎಣ್ಮಕಜೆ, ಗಣೇಶ್ ಕಾಜವಾಡ, ಭುಜಂಗಶೆಟ್ಟಿ, ಎ.ಚಂದ್ರಶೇಖರನ್, ವರ್ಕಾಡಿ ಗ್ರಾ.ಪಂ.ಅಧ್ಯಕ್ಷೆ ಭಾರತಿ ಸುಳ್ಯಮೆ, ಪೈವಳಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಂತಿ, ಅಬ್ದುಲ್ಲ ಪೈವಳಿಕೆ, ಗಂಗಾಧರನ್ ಸದಸ್ಯರಾಗಿರುವರು.
ಬಹುತ್ವದ ಮೌಲ್ಯ ಎತ್ತಿ ಹಿಡಿಯಬೇಕು: ಸಚಿವ ಅಹಮದ್ ದೇವರಕೋವಿಲ್: ತುಳು ಅಕಾಡೆಮಿ ಅಧಿಕಾರ ಹಸ್ತಾಂತರಿಸಿ ಅಭಿಮತ
0
ನವೆಂಬರ್ 01, 2022