ಬದಿಯಡ್ಕ: ವಿದ್ಯಾನಗರ- ಮಾನ್ಯ- ನೀರ್ಚಾಲು -ಮಂಡ್ಯತಡ್ಕ ರಸ್ತೆಯಲ್ಲಿ ಮಾನ್ಯದಿಂದ ನೀರ್ಚಾಲು ತನಕದ ರಸ್ತೆ ದುರಸ್ತಿ ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆ ಸಂಚಾರ ನಿಷೇಧಿಸಲಾಗಿದ್ದು ಬಸ್ ಸಂಚಾರ ಮೊಟಕುಗೊಂಡಿದೆ.
ಪ್ರಸ್ತುತ ಬಸ್ ಗಳು ಕೊಲ್ಲಂಗಾನದಿಂದ ತಿರುಗಿ ಬದಲಿ ರಸ್ತೆಯಲ್ಲಿ ಸಂಚರಿಸಿ ನೀರ್ಚಾಲು ಮೂಲಕ ಮುಂಡ್ಯತ್ತಡ್ಕಕ್ಕೆ ಸಂಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕೊಲ್ಲಂಗಾನದ ಬಳಿಕ ದೇವರಕೆರೆ, ಮಾನ್ಯ, ವಿಷ್ಣುಮೂರ್ತಿನಗರ, ಪುದುಕೋಳಿ ವ್ಯಾಪ್ತಿಯ ನಿತ್ಯ ಪ್ರಯಾಣಿಕರಾದ ವಿದ್ಯಾರ್ಥಿಗಳು, ಮಹಿಳೆಯರು ಸಹಿತ ಸಾರ್ವಜನಿಕರು ಸಂಚರಿಸಲಾಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಮಧ್ಯೆ ಈ ರೂಟಿನ ಬಸ್ಸುಗಳು ಮಾನ್ಯ ತನಕ ಬಂದು ಕೊರತ್ತಿಗುಳಿ ದಾರಿಯಾಗಿ ನೀರ್ಚಾಲಿಗೆ ಹೋಗಬೇಕೆನ್ನುವ ಬೇಡಿಕೆಯನ್ನು ಈ ಹಿಂದೆಯೇ ಸಾರ್ವಜನಿಕರು ಮುಂದಿರಿಸಿದ್ದು, ಮನವಿಯನ್ನು ಖಾಸಗೀ ಬಸ್ಸುಗಳು ಗಮನಕ್ಕೆ ತಂದಿಲ್ಲ.
ಈ ಮಧ್ಯೆ ಗುರುವಾರದಿಂದ ಒಂದೇಒಂದು ಖಾಸಗೀ ಬಸ್ (ದುರ್ಗಾದೇವಿ ಮೋಟಾರ್ಸ್) ಸಾರ್ವಜನಿಕರ ಮನವಿಗೆ ಬೆಂಬಲ ನೀಡಿ ಮಾನ್ಯತನಕ ಬಂದು ಕೊರತಿಗುಳಿ ದಾರಿಯಾಗಿ ನೀರ್ಚಾಲಿಗೆ ಸಂಚಾರ ನಡೆಸುತ್ತಿದೆ. ಈ ಸಂದರ್ಭದಲ್ಲಿ ಮಾನ್ಯದ ನಾಗರಿಕರು ಗುರುವಾರ ಬಸ್ಸಿಗೆ ಅಪೂರ್ವ ಸ್ವಾಗತ ನೀಡಿದರು. ಮಾನ್ಯದ ಜನತೆಗೆ ಬೆಂಬಲವಾಗಿ ನಿಂತ ಬಸ್ಸಿನ ಮಾಲಕರಾದ ಲಕ್ಷ್ಮೀಶರಿಗೆ ಶಾಲು ಹೊದಿಸಿ ಊರವರ ಪರವಾಗಿ ಗೌರವಿಸಲಾಯಿತು.ಬಸ್ಸಿಗೆ ಬಾಳೆ ಕಂದುಗಳು, ಹೂಗಳಿಂದ ಅಲಂಕರಿಸಿ, ದೀಪ ಬೆಳಗಿಸಿದರು. ಸ್ಥಳೀಯ ಮುಖಂಡರು, ಸಾರ್ವಜನಿಕರು ಕಿಕ್ಕಿರಿದು ನೆರೆದಿದ್ದರು.