ಲಖನೌ: ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾಗಿರುವ ಶಿವಲಿಂಗವನ್ನು 'ಕಾರ್ಬನ್ ಡೇಟಿಂಗ್' ಪರೀಕ್ಷೆಗೆ ಒಳಪಡಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಾರಾಣಸಿ ಜಿಲ್ಲಾ ನ್ಯಾಯಾಲಯ ವಜಾಗೊಳಿಸಿದ್ದು, ಈ ತೀರ್ಪು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಲು ಅಲಹಾಬಾದ್ ಹೈಕೋರ್ಟ್ ಸಮ್ಮತಿಸಿದೆ.
ಹಿಂದೂ ಸಮುದಾಯಕ್ಕೆ ಸೇರಿದ ನಾಲ್ವರು ಮಹಿಳೆಯರು ಸಲ್ಲಿಸಿರುವ ದಾವೆಯನ್ನು ನ್ಯಾಯಮೂರ್ತಿ ಜೆ.ಜೆ.ಮುನೀರ್ ನೇತೃತ್ವದ ಏಕ ಸದಸ್ಯ ನ್ಯಾಯಪೀಠ ಮಾನ್ಯ ಮಾಡಿದೆ. ಕಾರ್ಬನ್ ಡೇಟಿಂಗ್ ವಿಧಾನದಿಂದ ಶಿವಲಿಂಗಕ್ಕೆ ಏನಾದರೂ ಹಾನಿ ಆಗಲಿದೆಯೇ ಎಂಬುದರ ಕುರಿತು ಪ್ರತಿಕ್ರಿಯೆ ನೀಡುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ಸೂಚಿಸಿದೆ. ಅಂಜುಮನ್ ಇಂತೆಜಾಮೀಯಾ ಮಸೀದಿ ಸಮಿತಿ ಹಾಗೂ ಇತರರಿಗೆ ನೋಟಿಸ್ ಕೂಡ ಜಾರಿ ಮಾಡಿದೆ.
ಶಿವಲಿಂಗದ ಕಾಲಮಾನ, ಸ್ವಭಾವ ಹಾಗೂ ಇತರ ಮಾಹಿತಿಗಳ ಪತ್ತೆಗಾಗಿ ಕಾರ್ಬನ್ ಡೇಟಿಂಗ್, ಗ್ರೌಂಡ್ ಪೆನೆಟ್ರೇಟಿಂಗ್ ರಡಾರ್ ಮತ್ತು ಉತ್ಖನನದಂತಹ ವಿಧಾನಗಳನ್ನು ಅನುಸರಿಸಿದರೆ ಶಿವಲಿಂಗಕ್ಕೆ ಧಕ್ಕೆಯಾಗಲಿದೆಯೇ ಇಲ್ಲವೆ ಎಂಬ ಕುರಿತು ಮುಂದಿನ ವಿಚಾರಣೆ ವೇಳೆಗೆ ವರದಿ ನೀಡುವಂತೆ ಎಎಸ್‌ಐನ ಮಹಾನಿರ್ದೇಶಕರಿಗೆ ನ್ಯಾಯಪೀಠ ನಿರ್ದೇಶಿಸಿದೆ.
ವಿಚಾರಣೆ ಮುಂದೂಡುವಂತೆ ವಾರಾಣಸಿ ಜಿಲ್ಲಾ ನ್ಯಾಯಾಲಯಕ್ಕೆ ಸೂಚಿಸಿರುವ ನ್ಯಾಯಪೀಠವು ಡಿಸೆಂಬರ್ ಮೊದಲ ವಾರದಲ್ಲಿ ಅರ್ಜಿಯ ವಿಚಾರಣೆಗೆ ದಿನಾಂಕ ನಿಗದಿಪಡಿಸುವಂತೆಯೂ ಹೇಳಿದೆ.