ನವದೆಹಲಿ: ನಟ ಅಮಿತಾಭ್ ಬಚ್ಚನ್ ಅವರ ಹೆಸರು, ಚಿತ್ರ ಹಾಗೂ ಧ್ವನಿಯನ್ನು ಅವರ ಒಪ್ಪಿಗೆ ಇಲ್ಲದೆ ಬಳಸಕೂಡದು ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ.
ಹಲವು ಸಂಸ್ಥೆಗಳು / ವ್ಯಕ್ತಿಗಳು ತಮ್ಮ ಅನುಮತಿ ಇಲ್ಲದೆ ಫೋಟೋ, ಹೆಸರು ಹಾಗೂ ಧ್ವನಿಯನ್ನು ಬಳಸುತ್ತಿದ್ದು, ಅವುಗಳಿಗೆ ನಿರ್ಬಂಧ ಹೇರಬೇಕು ಎಂದು ಕೋರಿ ಅಮಿತಾಭ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಅಮಿತಾಭ್ ಅವರ ಚಿತ್ರ, ಧ್ವನಿ, ಹೆಸರು ಹಾಗೂ ವ್ಯಕ್ತಿತ್ವ ಗುಣಲಕ್ಷಣಗಳನ್ನು ಅನುಮತಿ ಇಲ್ಲದೇ ಬಳಸಕೂಡದು ಎಂದು ಆದೇಶಿಸಿದೆ. ಅಲ್ಲದೇ ಅನುಮತಿ ಇಲ್ಲದೆ ಬಳಸಿದವುಗಳನ್ನು ತೆಗೆದುಹಾಕಿ ಎಂದು ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಸೂಚನೆ ನೀಡಿದೆ.
'ಕೆಲವು ತಮ್ಮ ಉತ್ಪನ್ನ ಹಾಗೂ ಸೇವೆಗಳನ್ನು ಪ್ರಚಾರ ಮಾಡುವ ಸಲುವಾಗಿ ಅರ್ಜಿದಾರರ ಸೆಲೆಬ್ರೆಟಿ ಸ್ಥಾನವನ್ನು ಅನುಮತಿ ಇಲ್ಲದೆ ಬಳಸುತ್ತಿರುವುದರಿಂದ ಅವರು ನೊಂದಿದ್ದಾರೆ' ಎಂದು ನ್ಯಾಯಾಲಯ ಹೇಳಿದೆ.
'ಏನು ನಡೆಯುತ್ತಿದೆ ಎನ್ನುವುದರ ಬಗ್ಗೆ ನಿಮಗೆ ಸಣ್ಣ ವಿಚಾರ ಹೇಳುತ್ತೇನೆ. ಕೆಲವರು ಅಮಿತಾಭ್ ಅವರ ಚಿತ್ರ ಇರುವ ಟಿ-ಶರ್ಟ್‌ಗಳನ್ನು ಮಾಡುತ್ತಿದ್ದಾರೆ, ಕೆಲವರು ನನ್ನ ಪೋಸ್ಟರ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ. ಇನ್ನು ಯಾರೋ amitabhbachchan.com ಎನ್ನುವ ಡೊಮೈನ್ ನೋಂದಣಿ ಮಾಡಿದ್ದಾರೆ. ಹೀಗಾಗಿ ನಾವು ಕೋರ್ಟ್‌ಗೆ ಬಂದೆವು' ಎಂದು ಅಮಿತಾಭ್ ಪರ ಹಾಜರಾದ ವಕೀಲ ಹರೀಶ್ ಸಾಳ್ವೆ ಹೇಳಿದ್ದಾರೆ.