ಬದಿಯಡ್ಕ: ಬದಿಯಡ್ಕದ ಖ್ಯಾತ ದಂತ ವೈದ್ಯ ಕೃಷ್ಣಮೂರ್ತಿ ಸರ್ಪಂಗಳ(57)ಅವರ ಸಾವಿಗೆ ಸಂಬಂಧಿಸಿ ಫೇಸ್‍ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕೀಳುಮಟ್ಟದ ಹೇಳಿಕೆ ಪೋಸ್ಟ್ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ವಿದ್ಯಾನಗರ ಠಾಣೆ ಪೊಲೀಸರು ಯುವಕನ ವಿರುದ್ಧ ಸ್ವ ಇಚ್ಛೆಯಿಂದ ಕೇಸು ದಾಖಲಿಸಿಕೊಂಡಿದ್ದಾರೆ. ಆಲಂಪಾಡಿ ನಿವಾಸಿ ರಶೀದ್ ಎಂಬಾತನ ವಿರುದ್ಧ ಈ ಕೇಸು ದಾಖಲಾಗಿದೆ. ವೈದ್ಯರ ಸಾವಿಗೆ ಸಂಬಂಧಿಸಿ ಕೀಳುಮಟ್ಟದ ಹಾಗೂ ವೈದ್ಯರ ಕುಟುಂಬವನ್ನು ಅವಹೇಳನಕಾರಿಯಾಗಿ ಚಿತ್ರಿಸಿ ಹೇಳಿಕೆ ಪೋಸ್ಟ್ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಡಾ ಕೃಷ್ಣಮೂರ್ತಿ ಅವರ ಸಾವಿಗೆ ಸಂಬಂಧಿಸಿ ವಿವಿಧ ರೀತಿಯ ಪ್ರಚಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ನಿಗಾಯಿರಿಸಿರುವುದಾಯೂ ಪೊಲೀಸರು ತಿಳಿಸಿದ್ದಾರೆ. ಈ ಮಧ್ಯೆ ಡಾ. ಕೃಷ್ಣಮೂರ್ತಿ ಆತ್ಮಹತ್ಯೆ ಮಾಡಿಕೊಳ್ಳುವ ಸ್ವಭಾವದವರಲ್ಲ. ಅವರನ್ನು ಮಾನಸಿಕವಾಗಿ ಕುಗ್ಗಿಸಿ ಸ್ವ ಆತ್ಮಹತ್ಯೆಗೈಯ್ಯುವಂತೆ ಕುಗ್ಗಿಸಲಾಗಿದೆ. ಈ ಬಗ್ಗೆ ಸಮಗ್ರ ತನಿಖೆಯಿಂದ ಮಾತ್ರ ಸತ್ಯ ಹೊರಬರಲು ಸಾಧ್ಯ ಎಂದು ವೈದ್ಯರ ಕುಟುಂಬದವರು ತಿಳಿಸಿದ್ದಾರೆ.
ಪಿಟಿಎ ಅಧ್ಯಕ್ಷ ಸ್ಥಾನದಿಂದ ಔಟ್:
ಡಾ. ಕೃಷ್ಣಮೂರ್ತಿ ನಿಗೂಢ ಸಾವಿನ ಹಿನ್ನೆಲೆಯಲ್ಲಿ ಬಂಧಿತರಾಗಿರುವವರ ಪೈಕಿ ಮಹಮ್ಮದ್ ಹನೀಫ ಯಾನೆ ಅನ್ವರ್ ಬದಿಯಡ್ಕ ನವಜೀವನ ಹೈಯರ್ ಸೆಕೆಂಡರಿ ಶಾಲೆ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷನಾಗಿದ್ದು, ಈತನನ್ನು ಈ ಸ್ಥಾನದಿಂದ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ.
ನಿನ್ನೆ (ಸೋಮವಾರ) ಮಧ್ಯಾಹ್ನ ಶಾಲೆಯಲ್ಲಿ ನಡೆದ ಶಾಲಾ ರಕ್ಷಕ-ಶಿಕ್ಷಕ ಸಂಘದ ತುರ್ತು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಅಧ್ಯಕ್ಷರ ಹೊಣೆಯನ್ನು ಉಪಾಧ್ಯಕ್ಷ ಶಾಫಿ ಚೂರಿಪಳ್ಳ ಅವರಿಗೆ ವಹಿಸಿಕೊಡಲಾಗಿದೆ. ಡಾ. ಕೃಷ್ಣಮೂರ್ತಿ ನಿಗೂಢ ಸಾವಿಗೆ ಸಂಬಂಧಿಸಿ ಮಹಮ್ಮದ್ ಹನೀಫ ಯಾನೆ ಅನ್ವರ್ ಸೇರಿದಂತೆ ಐದು ಮಂದಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಕಳಂಕಿತನಾದ ಅಧ್ಯಕ್ಷನನ್ನು ಆ ಸ್ಥಾನದಿಂದ ಹೊರಗಿರಿಸುವಂತೆ ಹಲವಾರು ಮಂದಿ ಹೆತ್ತವರು ಆಗ್ರಹಿಸಿದ ಹಿನ್ನೆಲೆಯಲ್ಲಿ ತುರ್ತು ಸಭೆ ನಡೆಸಿ ಕ್ರಮ ಕೈಗೊಳ್ಳಲಾಗಿದೆ.
ದಂತವೈದ್ಯರ ಸಾವಿನ ಬಗ್ಗೆ ಕೀಳುಮಟ್ಟದ ಹೇಳಿಕೆ: ಯುವಕನ ವಿರುದ್ದ ಪ್ರಕರಣ ದಾಖಲು: ಪಿಟಿಎ ಅಧ್ಯಕ್ಷ ಸ್ಥಾನದಿಂದ ಅನ್ವರ್ ವಜಾ
0
ನವೆಂಬರ್ 14, 2022