ಚಳಿಗಾಲ ಮೆತ್ತನೆ ಕಾಲಿಡುತ್ತಿದೆ. ಇನ್ನೂ ಯಾರನ್ನೇ ಕೇಳಿ... ಶೀತ, ಜ್ವರ, ಗಂಟಲು ನೋವು, ಕೆಮ್ಮು, ನೆಗಡಿಯದ್ದೇ ಮಾತು. ಇದು ಸಾಮಾನ್ಯ ಕೂಡ. ಹವಾಮಾನದಲ್ಲಿ ಬದಲಾವಣೆಯಾದಾಗ ಇಂತಹ ಕಾಲೋಚಿತ ಆರೋಗ್ಯ ಸಮಸ್ಯೆಗಳು ಮಾಮೂಲಿ.
ಏಕೆಂದರೆ, ವರ್ಷದ ಈ ಋತುವಿನಲ್ಲಿ, ವೈರಸ್‌ಗಳು ರೂಪಾಂತರಗೊಂಡು, ಹೆಚ್ಚು ಬೆಳೆಯುತ್ತವೆ, ಇದರಿಂದ ಸೋಂಕು, ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತಲೇ ಇರುತ್ತದೆ. ಆದರೆ ಚಿಂತೆ ಬೇಡ... ಕೆಲವೊಂದು ಔಷಧಿಗಳ ಜೊತೆಗೆ ಈ ಚಳಿಗಾಲದಲ್ಲಿ ಬರುವ ಕೆಮ್ಮು, ಶೀತವನ್ನು ಹೋಗಲಾಡಿಸಲು ಕೆಲವೊಂದು ಟೀ ರೀತಿಯ ಮನೆಮದ್ದುಗಳನ್ನು ಪ್ರಯತ್ನಿಸಬಹುದು.
ಇವು ನಿಮ್ಮನ್ನು ಆಸ್ಪತ್ರೆ ಅಲೆಯುವುದನ್ನು ತಪ್ಪಿಸಬಹುದು. ಹಾಗಾದರೆ ಅಂತಹ ಮನೆಮದ್ದುಗಳು ಯಾವುವು ಎಂಬುದನ್ನು ಇಲ್ಲಿ ನೋಡೋಣ.
ಶುಂಠಿ ಟೀ:
ಶುಂಠಿಯ ಆರೋಗ್ಯ ಪ್ರಯೋಜನಗಳ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ??? ದೇಹದಲ್ಲಿ ಏನೇ ಏರುಪೇರಾದರೂ ಮೊದಲು ಸಹಾಯಕ್ಕೆ ಬರುವುದೇ ಈ ಗಿಡಮೂಲಿಕೆ ಅಂದ್ರೆ ತಪ್ಪಾಗೋದಿಲ್ಲ. ಇದು ಉರಿಯೂತದ ಗುಣಲಕ್ಷಣಗಳಿಂದ ತುಂಬಿರುವ ಅದ್ಭುತ ಮೂಲಿಕೆಗಳಲ್ಲಿ ಒಂದಾಗಿದ್ದು, ಇದು ಸೋಂಕಿಗೆ ಕಾರಣವಾಗುವ ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ. ಇದರಲ್ಲಿರುವ ಆಕ್ಟಿವ್ ಘಟಕ ಜಿಂಜರಾಲ್ ನಿಮ್ಮ ದೇಹವನ್ನು ಒಳಗಿನಿಂದ ಸರಿಪಡಿಸಿ, ಸೋಂಕಿನಿಂದ ತ್ವರಿತ ಪರಿಹಾರವನ್ನು ನೀಡುತ್ತದೆ. ಆದ್ದರಿಂದ ಗಂಟಲು ನೋವು, ಶೀತ, ಕೆಮ್ಮಿನ ಸಮಸ್ಯೆ ಶುರುವಾದಾಗ ಶುಂಠಿ ಟೀ ಮಾಡಿ ಕುಡಿಯುವುದು ಉತ್ತಮವಾಗಿದೆ.
ದಾಲ್ಚಿನ್ನಿ, ಲವಂಗ ಮತ್ತು ನಿಂಬೆ ಟೀ
ನೆಗಡಿ ಮತ್ತು ಕೆಮ್ಮಿನಿಂದ ಬಳಲುತ್ತಿರುವವರಿಗೆ ಮತ್ತೊಂದು ಉತ್ತಮ ಟೀ ಅಂದ್ರೆ, ದಾಲ್ಚಿನ್ನಿ, ಲವಂಗ ಮತ್ತು ನಿಂಬೆ ಮಿಶ್ರಿತ ಟೀ. ಈ ಚಹಾದಲ್ಲಿರುವ ಎಲ್ಲಾ ಪದಾರ್ಥಗಳು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳಿಂದ ತುಂಬಿದ್ದು, ಇದು ಕೆಮ್ಮಿಗೆ ಕಾರಣವಾದ ಸೂಕ್ಷ್ಮಜೀವಿಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ನಿಂಬೆಯು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದ್ದು, ಇದು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಈ ಮೂಲಕ ಮತ್ತೆ ಮತ್ತೆ ಶೀತ ಮತ್ತು ಕೆಮ್ಮಿನ ಅಪಾಯಗಳ ವಿರುದ್ಧ ರಕ್ಷಣೆಯನ್ನು ಒದಗಿಸುತ್ತದೆ.
ಯೂಕಲಿಪ್ಟಸ್ ಅಥವಾ ನೀಲಗಿರಿ ಟೀ:
ಈ ನೀಲಗಿರಿ ಟೀ ಬಗ್ಗೆ ನಿಮಗೆ ಸಾಮಾನ್ಯವಾಗಿ ತಿಳಿದಿರಲಿಕ್ಕಿಲ್ಲ ಅಲ್ವಾ? ಆದರೆ, ಒಂದು ಕಪ್ ನೀಲಗಿರಿ ಟೀ ನಿಮ್ಮ ಶೀತ ಹಾಗೂ ನೆಗಡಿಯ ಲಕ್ಷಣಗಳಿಂದ ತಕ್ಷಣ ಪರಿಹಾರವನ್ನು ನೀಡಬಹುದು.ಇದು ಸಹ ಇತರ ಟೀಗಳಂತೆ, ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಶೀತ ಮತ್ತು ಕೆಮ್ಮಿಗೆ ಕಾರಣವಾಗುವ ಸೂಕ್ಷ್ಮಜೀವಿಗಳ ವಿರುದ್ಧ ರಾಮಬಾಣವಾಗಿ ಕಾರ್ಯ ನಿರ್ವಹಿಸುತ್ತದೆ. ಈ ನೀಲಗಿರಿ ಎಲೆಯು ನಿಮಗೆ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಅದರ ಸಹಾಯದಿಂದ ನಿಮ್ಮ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಿ.
ಜೇನುತುಪ್ಪ - ತುಳಸಿ ಟೀ:
ಈ ಎರಡೂ ಮನೆಮದ್ದುಗಳನ್ನು ಬಹಳ ಹಿಂದಿನಿಂದಲೂ ಕಾಲೋಚಿತ ಆರೋಗ್ಯ ಸಮಸ್ಯೆಗಳಿಗೆ ಮನೆಮದ್ದಾಗಿ ಬಳಕೆ ಮಾಡಲಾಗುತ್ತಿದೆ. ಈ ಎರಡೂ ಪದಾರ್ಥಗಳು ಶೀತ ಮತ್ತು ಕೆಮ್ಮಿನ ವಿರುದ್ಧ ಹೋರಾಡುವ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಪವಿತ್ರವಾದ ತುಳಸಿಯು ಆಂಟಿಮೈಕ್ರೊಬಿಯಲ್, ಉರಿಯೂತ ನಿವಾರಕ, ಆಂಟಿಟಸ್ಸಿವ್ (ಕೆಮ್ಮು-ನಿವಾರಕ) ಮತ್ತು ಅಲರ್ಜಿ-ವಿರೋಧಿ ಗುಣಲಕ್ಷಣಗಳನ್ನು ಹೊಂದಿದ್ದು, ಇದು ಶೀತ ಮತ್ತು ಕೆಮ್ಮಿನ ರೋಗಲಕ್ಷಣಗಳಿಂದ ತ್ವರಿತ ಪರಿಹಾರವನ್ನು ನೀಡಲು ಸಹಾಯ ಮಾಡುತ್ತದೆ. ಜೊತೆಗೆ ಜೇನುತುಪ್ಪವೂ ಸಹ ಸಾಕಷ್ಟು ಆರೋಗ್ಯ ಸ್ನೇಹಿ ಅಂಶಗಳನ್ನು ಹೊಂದಿದ್ದು, ಶೀತ-ಕೆಮ್ಮಿನ ಸಮಸ್ಯೆಗೆ ಪರಿಹಾರ ನೀಡುವುದು. ಇದಕ್ಕೆ ತುಳಸಿಯನ್ನು ನೀರಿನಲ್ಲಿ ಕುದಿಸಿ, ಅದಕ್ಕೆ ಜೇನುತುಪ್ಪ ಸೇರಿಸಿ ಸೇವಿಸುವುದು ಉತ್ತಮ ದಾರಿ.
ದೊಡ್ಡಪತ್ರೆ ಟೀ:
ದೊಡ್ಡಪತ್ರೆಯೂ ಸಹ ಮತ್ತೊಂದು ಪ್ರಮುಖ ಮೂಲಿಕೆಯಾಗಿದ್ದು, ಅದನ್ನು ಚಹಾದ ರೂಪದಲ್ಲಿ ಸೇವಿಸಿದಾಗ ಶೀತ ಮತ್ತು ಕೆಮ್ಮುಗಳ ವಿರುದ್ಧ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಈ ಎಲೆಯು ಸೂಕ್ಷ್ಮಾಣುಜೀವಿಗಳ ಬೆಳವಣಿಗೆಯ ವಿರುದ್ಧ ಉತ್ತಮವಾಗಿ ಕಾರ್ಯನಿರ್ವಹಿಸುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಈ ಟೀ ಮಾಡಲು, ಮೊದಲು ನೀರಿನಲ್ಲಿ ದೊಡ್ಡಪತ್ರೆ ಎಲೆಗಳನ್ನು ಸೇರಿಸಿ, ಚೆನ್ನಾಗಿ ಕುದಿಸಿ, ಸೋಸಿ ಸೇವಿಸಿ. ಅಗತ್ಯವಿದ್ದರೆ, ಸ್ವಲ್ಪ ಜೇನುತುಪ್ಪವನ್ನೂ ಸೇರಿಸಬಹುದು.