ತಿರುವನಂತಪುರಂ: ಸೋಮವಾರ ತಮ್ಮ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸುವುದಕ್ಕೆ ಎರಡು ಮಲಯಾಳಂ ಸುದ್ದಿ ವಾಹಿನಿಗಳಿಗೆ ಕೇರಳ ರಾಜ್ಯಪಾಲ (Kerala Governor) ಆರಿಫ್ ಮೊಹಮ್ಮದ್ ಖಾನ್ (Arif Mohammad Khan) ನಿಷೇಧ ಹೇರಿದ ಬೆನ್ನಿಗೆ ಇಂದು ಕೇರಳದಲ್ಲಿ ರಾಜ್ಯಪಾಲರ ಕ್ರಮವನ್ನು ಖಂಡಿಸಿ ಪತ್ರಕರ್ತರು (Kerala journalists) ಪ್ರತಿಭಟನೆ ನಡೆಸಿದ್ದಾರೆ.
ಕೇರಳ ಕಾರ್ಯನಿರತ ಪತ್ರಕರ್ತರ ಯೂನಿಯನ್ ಆಯೋಜಿಸಿದ್ದ ಒಂದು ಕಿಮೀ ದೂರದ ಪ್ರತಿಭಟನಾ ಮೆರವಣಿಗೆ ರಾಜಭವನದ ಸಮೀಪ ಕೊನೆಗೊಂಡಿದೆ.
ಸೋಮವಾರ ರಾಜ್ಯಪಾಲರು ಕೊಚ್ಚಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿ ಸ್ಥಳದಿಂದ ಕೈರಾಳಿ ನ್ಯೂಸ್ ಮತ್ತು ಮೀಡಿಯಾ ಒನ್ ಪ್ರತಿನಿಧಿಗಳನ್ನು ಹೊರಹೋಗುವಂತೆ ಸೂಚಿಸಿದ್ದರಲ್ಲದೆ ಪತ್ರಕರ್ತರಂತೆ ಸೋಗು ಹಾಕಿದ ರಾಜಕೀಯ ಮಂದಿಯ ಜೊತೆ ತಾವು ಮಾತನಾಡುವುದಿಲ್ಲ ಎಂದಿದ್ದರು.
ಶಾಹ್ ಬಾನೋ ಪ್ರಕರಣದ ತಮ್ಮ ನಿಲುವಿಗಾಗಿ ಮೀಡಿಯಾ ಒನ್ ತನ್ನನ್ನು ಟಾರ್ಗೆಟ್ ಮಾಡುತ್ತಿದೆ ಹಾಗೂ ಕೈರಾಳಿ ನ್ಯೂಸ್ ತಮ್ಮ ಬಗ್ಗೆ ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿದೆ, ತಿದ್ದುಪಡಿ ಮಾಡುವಂತೆ ರಾಜಭವನದಿಂದ ಬಂದ ಹಲವು ಮನವಿಗಳನ್ನು ಪುರಸ್ಕರಿಸಿಲ್ಲ ಎಂಬುದು ರಾಜ್ಯಪಾಲರ ಆರೋಪವಾಗಿದೆ.
ರಾಜ್ಯ ಸರ್ಕಾರ ನಡೆಸುವ ವಿವಿಗಳಿಗೆ ಉಪಕುಲಪತಿಗಳ ನೇಮಕಾತಿ ಕುರಿತಂತೆ ರಾಜ್ಯಪಾಲರು ಹಾಗೂ ರಾಜ್ಯದ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರದ ನಡುವೆ ಪ್ರಸ್ತುತ ಜಟಾಪಟಿ ನಡೆಯುತ್ತಿದೆ.
ರಾಜ್ಯಪಾಲರ ನಿಲುವು ತಪ್ಪು ಹಾಗೂ ಅವರು ಎರಡು ವಾಹಿನಿಗಳ ವಿರುದ್ಧದ ನಿಷೇಧವನ್ನು ವಾಪಸ್ ಪಡೆಯಬೇಕೆಂದು ಕೇರಳ ಕಾರ್ಯನಿರತ ಪತ್ರಕರ್ತರ ಸಂಘ ಆಗ್ರಹಿಸಿದೆ.