ಪ್ರಯಾಗ್‌ರಾಜ್: ಸಮಾಜಮುಖಿ ಕಾರ್ಯಗಳನ್ನು ಮಾಡಿದ ಎಲ್ಲ ಮಹಾಪುರುಷರು ಆಧ್ಯಾತ್ಮಿಕತೆಯನ್ನು ಆಧಾರವಾಗಿಟ್ಟುಕೊಂಡು ಕೆಲಸ ಮಾಡಿದ್ದು, ಆಧ್ಯಾತ್ಮಿಕತೆ ಇಲ್ಲದೇ ಧರ್ಮ ಇರುವುದಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಮಂಗಳವಾರ ಹೇಳಿದರು.
ಅಲೋಪಿಬಾಗ್‌ನಲ್ಲಿ ಸ್ವಾಮಿ ವಾಸುದೇವಾನಂದ ಸರಸ್ವತಿ ಅವರ ಆಶ್ರಮದಲ್ಲಿ ಆಯೋಜಿಸಿದ್ದ 'ಆರಾಧನಾ ಮಹೋತ್ಸವ' ಕಾರ್ಯಕ್ರಮದಲ್ಲಿ ಮಾತನಾಡಿ, 'ಸಂತರು, ಮಹಾತ್ಮರು, ಸನ್ಯಾಸಿಗಳು ಅಥವಾ ಮಹಾಪುರುಷರಾದ ರವೀಂದ್ರನಾಥ ಟ್ಯಾಗೋರ್, ಗಾಂಧೀಜಿ ಅಥವಾ ಅಂಬೇಡ್ಕರ್ ಅವರು ಧರ್ಮವಿಲ್ಲದೆ ಏನೂ ಆಗುವುದಿಲ್ಲ ಎಂದು ಹೇಳಿದ್ದಾರೆ. ಧರ್ಮ ಎಂದರೆ ಎಲ್ಲರನ್ನು ಕರೆದುಕೊಂಡು ಹೋಗುವುದು, ಎಲ್ಲರನ್ನೂ ಒಟ್ಟಿಗೆ ಸೇರಿಸುವುದು, ಮೇಲೆತ್ತುವುದಾಗಿದೆ. ಧರ್ಮದ ಹುಟ್ಟು ಅಧ್ಯಾತ್ಮದಿಂದ ಆಗಿದೆ' ಎಂದರು.
ನಮ್ಮ ವೈಯಕ್ತಿಕ, ಕೌಟುಂಬಿಕ ಮತ್ತು ಸಾಮಾಜಿಕ ಜೀವನವನ್ನು ಶುದ್ಧೀಕರಿಸುವುದು ಆಧ್ಯಾತ್ಮಿಕತೆಯಾಗಿದೆ. ನಡತೆಯಿಂದ ಜನರಿಗೆ ಮಾರ್ಗದರ್ಶನ ನೀಡುವ ಮಹಾಪುರುಷರ ಪರಂಪರೆ ಇರುವುದು ನಮ್ಮ ನಾಡಿನ ಸೌಭಾಗ್ಯ. ಇದೇ ಸಾಲಿನಲ್ಲಿ ಬ್ರಹ್ಮಲಿನ್ ಸ್ವಾಮಿ ಶಾಂತಾನಂದ ಸರಸ್ವತಿ ಇದ್ದರು ಎಂದು ಹೇಳಿದರು.
ಜ್ಯೋತಿಷ ಪೀಠದ ಶಂಕರಾಚಾರ್ಯರಾದ ಬ್ರಹ್ಮಲಿನ್ ಬ್ರಹ್ಮಾನಂದ ಸರಸ್ವತಿಯವರ 150ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮವು ಡಿಸೆಂಬರ್ 8, 2022 ರವರೆಗೆ ನಡೆಯಲಿದೆ.