ತಿರುವನಂತಪುರ: ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಹೆಲಿಕಾಪ್ಟರ್ ಸೇವೆ ನೀಡುವುದಾಗಿ ಹೇಳಿದ್ದ ಖಾಸಗಿ ಹೆಲಿಕಾಪ್ಟರ್ ಸೇವಾ ಸಂಸ್ಥೆಯು ಈಗ ಕೇರಳ ಹೈಕೋರ್ಟ್ ಆದೇಶದಿಂದ ಕಾನೂನು ತೊಡಕಿನಲ್ಲಿ ಸಿಲುಕಿದೆ.
ಖಾಸಗಿ ಸಂಸ್ಥೆಯೊಂದು ಕೆಲ ದಿನಗಳ ಹಿಂದೆ ಮಾಡಿದ್ದ ಈ ಘೋಷಣೆಯನ್ನು ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದೆ.
ನಿಲಕಲ್‌ಗೆ ಹೆಲಿಕಾಪ್ಟರ್ ಸೇವೆ ನೀಡಲು ಅಗತ್ಯ ಅನುಮತಿಯಗಳನ್ನು ಖಾಸಗಿ ಸಂಸ್ಥೆಯು ಪಡೆದಿಲ್ಲ ಎಂಬ ಕಾರಣಕ್ಕಾಗಿ ಹೆಲಿಕಾಪ್ಟರ್ ಸೇವೆಗೆ ಕೇರಳ ಹೈಕೋರ್ಟ್ ತಡೆ ಒಡ್ಡಿದೆ. ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನು ಸಲ್ಲಿಸಲು ಸಂಸ್ಥೆಗೆ ಹೇಳಿದೆ.
ಎರಡು ತಿಂಗಳ ಅವಧಿಯ ಶಬರಿಮಲೆ ಯಾತ್ರೆಗೆ ಕಳೆದ ವಾರವಷ್ಟೇ ಚಾಲನೆ ನೀಡಲಾಯಿತು. ಈ ಹಿನ್ನೆಲೆಯಲ್ಲಿ ಕೊಚ್ಚಿಯಿಂದ ಪಂಬಾ ಸಮೀಪದ ನಿಲಕಲ್‌ಗೆ ಹೆಲಿಪ್ಯಾಡ್‌ಗೆ ದಿನದಲ್ಲಿ ಎರಡು ಬಾರಿ ಹೆಲಿಕಾಪ್ಟರ್ ಸೇವೆ ಒದಗಿಸುವುದಾಗಿ ಖಾಸಗಿ ಹೆಲಿಕಾಪ್ಟರ್ ಸೇವಾ ಸಂಸ್ಥೆ ಹೇಳಿತ್ತು. ಒಬ್ಬ ವ್ಯಕ್ತಿಗೆ ತೆರಿಗೆ ಹೊರತುಪಡಿಸಿ ₹ 29,500 ದರ ವಿಧಿಸುವುದಾಗಿ ಹೇಳಿತ್ತು.
ನಿಲಕಲ್‌ನಲ್ಲಿ ನಿಲುಗಡೆ ಮಾಡಲು ನಿಗದಿಪಡಿಸಿರುವ ದರ ಪಾವತಿಸಿ ಖಾಸಗಿ ಸಂಸ್ಥೆಗಳು ಹೆಲಿಕಾಪ್ಟರ್ ಸೇವೆ ನೀಡಬಹುದು ಎಂದು ಟ್ರಾವಂಕೋರ್ ದೇವಸ್ಥಾನಂ ಮಂಡಳಿಯ ಅಧ್ಯಕ್ಷ ಕೆ. ಆನಂದಗೋಪನ್ ಇತ್ತೀಚೆಗೆ ತಿಳಿಸಿದ್ದರು.
ಈಗಾಗಲೇ ಹಲವು ಉದ್ಯಮಿಗಳು ಈ ಹೆಲಿಪ್ಯಾಡ್ ಬಳಸಿಕೊಂಡು, ಮಂಡಳಿ ವಿಧಿಸಿದ ಶುಲ್ಕ ಪಾವತಿಸಿ ಶಬರಿಮಲೆಗೆ ಬರುತ್ತಿದ್ದಾರೆ.
ಈ ಮೊದಲು ಸಹ ಮಂಡಳಿಯು ಹೆಲಿಕಾಪ್ಟರ್ ಸೇವೆ ಒದಗಿಸುವವರಿಗಾಗಿ ಹುಡುಕಾಟ ನಡೆಸಿತ್ತು. ಆದರೆ ತನ್ನ ಷರತ್ತುಗಳಿಗೆ ಒಪ್ಪುವ ಸೂಕ್ತ ಸೇವಾ ಸಂಸ್ಥೆ ಮಂಡಳಿಗೆ ದೊರೆತಿರಲಿಲ್ಲ.