ಶಿಮ್ಲಾ: ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಗೆ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧವೇ ಕಣಕ್ಕಿಳಿದಿರುದ ಐವರು ನಾಯಕರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಬಿಜೆಪಿ ಸೋಮವಾರ ಅಮಾನತು ಮಾಡಿದೆ.
ಹಿಮಾಚಲ ಪ್ರದೇಶ ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಕೃಪಾಲ್ ಪಾರ್ಮರ್ ಹಾಗೂ ಮಾಜಿ ಶಾಸಕರಾದ ತೇಜವಂತ್ ಸಿಂಗ್ ನೇಗಿ, ಕಿಶೋರ್ ಲಾಲ್, ಮನೋಹರ್ ಧಿಮಾನ್, ಕೆ.ಎಲ್.ಠಾಕೂರ್ ಅಮಾನತಾದವರು.
ಇವರಿಗೆ ಟಿಕೆಟ್ ನಿರಾಕರಿಸಿದ್ದ ಬಿಜೆಪಿ, ಬೇರೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಹೀಗಾಗಿ ಇವರೆಲ್ಲ ಪಕ್ಷದ ವಿರುದ್ಧ ಬಂಡಾಯ ಸಾರಿ, ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ.
'ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಿದವರನ್ನು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಸುರೇಶ್ ಕಶ್ಯಪ್ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಅಮಾನತುಗೊಳಿಸಿದ್ದಾರೆ' ಎಂದು ಪಕ್ಷ ಪ್ರಕಟಿಸಿದೆ.
ನವೆಂಬರ್ 12ರಂದು ಹಿಮಾಚಲಯ ಪ್ರದೇಶ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಪಕ್ಷದ ಹತ್ತಕ್ಕೂ ಹೆಚ್ಚು ನಾಯಕರು ಪಕ್ಷೇತರರಾಗಿ ಕಣಕ್ಕಿಳಿದಿದ್ದು, ಬಿಜೆಪಿಗೆ ತಲೆ ನೋವಾಗಿ ಪರಿಣಮಿಸಿದೆ.