ಪನೋಮ್ ಪೆನ್: ಭಾರತ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಉಕ್ರೇನ್ ವಿದೇಶಾಂಗ ಸಚಿವ ಡಿಮೆಟ್ರೊ ಕುಲೆಬಾ ಅವರೊಂದಿಗೆ ಶನಿವಾರ ಮಾತುಕತೆ ನಡೆಸಿದರು.
ರಷ್ಯಾ- ಉಕ್ರೇನ್ ನಡುವಿನ ಯುದ್ಧ ನಿಲ್ಲಿಸುವ ಹಾದಿಗಳು, ಉಕ್ರೇನ್‌ನ ಇತ್ತೀಚಿನ ಬೆಳವಣಿಗೆ ಹಾಗೂ ಪರಮಾಣು ಬಗೆಗಿನ ಕಳವಳದ ಬಗ್ಗೆ ಚರ್ಚಿಸಿದರು.
ಕಾಂಬೋಡಿಯಾ ರಾಜಧಾನಿಯಲ್ಲಿ ನಡೆಯುತ್ತಿರುವ ಭಾರತ- ಆಸಿಯಾನ್ ರಾಷ್ಟ್ರಗಳ (ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ) ಶೃಂಗದಲ್ಲಿ ಭಾಗಿಯಾಗಿರುವ ಅವರು ಕುಲೆಬಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
'ಉಕ್ರೇನ್ ವಿದೇಶಾಂಗ ಸಚಿವ ಡಿಮೆಟ್ರೊ ಕುಲೆಬಾ ಅವರನ್ನು ಭೇಟಿಯಾಗಿ ಸಂತೋಷವಾಯಿತು. ಉಕ್ರೇನ್‌ನಲ್ಲಿನ ಇತ್ತೀಚಿನ ಬೆಳವಣಿಗೆ, ಪರಮಾಣು ಬಳಕೆ ಬಗೆಗಿನ ಕಳವಳದ ಬಗ್ಗೆ ಚರ್ಚೆ ನಡೆಸಲಾಯಿತು' ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ.
'ಭಾರತ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರೊಂದಿಗೆ ದ್ವಿಪಕ್ಷೀಯ ಸಹಕಾರ, ಜಾಗತಿಕ ಆಹಾರ ಭದ್ರತೆ ಮತ್ತು ಉಕ್ರೇನ್- ರಷ್ಯಾ ಯುದ್ಧ ನಿಲ್ಲಿಸುವ ಕುರಿತು ಚರ್ಚೆ ನಡೆಸಲಾಯಿತು' ಎಂದು ಕುಲೇಬಾ ಅವರು ಟ್ವೀಟ್ ಮಾಡಿದ್ದಾರೆ.