ಮಥುರಾ: ತಂದೆಯಿಂದಲೇ ಕೊಲೆಯಾದ ಮರ್ಯಾದೆಗೇಡು ಹತ್ಯೆ ಸಂತ್ರಸ್ತೆ, ದೆಹಲಿ ಮೂಲದ ಮಹಿಳೆ ಆಯುಷಿ ಯಾದವ್ (21) ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದ್ದು, ಆಕೆಯ ಮೇಲೆ ಎರಡು ಬಾರಿ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಒಂದು ಗುಂಡು ಆಕೆಯ ಎದೆ ಸೀಳಿ ಹೊರಬಂದರೆ, ಮತ್ತೊಂದು ಆಕೆಯ ಬುರುಡೆಯಲ್ಲಿ ಹೊಕ್ಕಿದೆ ಎಂದು ಹೇಳಿದ್ದಾರೆ.
ಬಿಸಿಎ ವ್ಯಾಸಂಗ ಮಾಡುತ್ತಿದ್ದ ಆಯುಷಿಯನ್ನು ಆಕೆಯ ತಂದೆಯೇ ಗುಂಡಿಕ್ಕಿ ಹತ್ಯೆ ಮಾಡಿ, ಬಳಿಕ ಮೃತದೇಹವನ್ನು ಟ್ರಾಲಿ ಚೀಲದಲ್ಲಿ ಇರಿಸಿ ಯಮುನಾ ಎಕ್ಸ್‌ಪ್ರೆಸ್ ಹೆದ್ದಾರಿ ಬಳಿ ಎಸೆದಿದ್ದ. ಆತನನ್ನು ಭಾನುವಾರವೇ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.
ಈ ಮೊಕದ್ದಮೆ ಕುರಿತು ಮತ್ತಷ್ಟು ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ. ಆಯುಷಿ ತನ್ನ ಸಹಪಾಠಿ ಛತ್ರಪಾಲ್ ಗುರ್ಜಾರ್ ಎಂಬುವವರನ್ನು ವರ್ಷದ ಹಿಂದೆ ಆರ್ಯ ಸಮಾಜ ದೇವಾಲಯದಲ್ಲಿ ಮದುವೆಯಾಗಿದ್ದಳು. ಇದು ಅಂತರ್ಜಾತಿ ವಿವಾಹವಾದ ಕಾರಣ ಆಕೆಯ ಪೋಷಕರು ಈ ಮದುವೆಯನ್ನು ಒಪ್ಪಿರಲಿಲ್ಲ. ಮದುವೆ ಬಳಿಕ ಆಕೆ ತನ್ನ ಗಂಡನ ಮನೆಗೆ ಹೋಗಿ ಬರುತ್ತಿದ್ದಳು. ಇದರಿಂದ ತಮ್ಮ ಸಾಮಾಜಿಕ ಸ್ಥಾನಮಾನಕ್ಕೆ ಕುತ್ತು ಬರುತ್ತದೆ ಎಂದು ಅವರು ಭಾವಿಸಿದ್ದರು. ಆಕೆ ಗಂಡನ ಮನೆಯಿಂದ ತವರು ಮನೆಗೆ ಗುರುವಾರ ಬಂದಿದ್ದಳು. ಆ ದಿನವೇ ರಿವಾಲ್ವರ್ ಬಂದೂಕು ಆಕೆಯ ತಂದೆ ಆಕೆಯನ್ನು ಹತ್ಯೆ ಮಾಡಿದ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಗೆ ಬಳಸಿದ ಬಂದೂಕು ಮತ್ತು ಮೃತದೇಹ ಸಾಗಿಸಲು ಬಳಸಿದ ಕಾರನ್ನು ವಶಪಡಿಸಿಕೊಂಡ ಬಳಿಕ ಸೋಮವಾರ ಸಂತ್ರಸ್ತೆಯ ತಾಯಿಯನ್ನೂ ವಶಕ್ಕೆ ತೆಗೆದುಕೊಳ್ಳಲಾಯಿತು. ಈ ಅಪರಾಧದಲ್ಲಿ ಆಕೆಯ ಸಮಪಾಲು ಇದೆ ಎಂದು ಪರಿಗಣಿಸಲಾಗಿದೆ ಎಂದರು.
ಆಕೆಯ ಮೃತದೇಹದ ಅಂತಿಮ ಸಂಸ್ಕಾರವನ್ನು ಆಕೆಯ ಪೋಷಕರು ಸೋಮವಾರ ನೆರವೇರಿಸಿದರು. ಆಕೆಯ ತಂದೆಯೇ ಚಿತೆಗೆ ಅಗ್ನಿಸ್ಪರ್ಶ ಮಾಡಿದ ಎಂದು ಪೊಲೀಸರು ತಿಳಿಸಿದರು.