ಮಾನಸಿಕ ಒತ್ತಡ ನಮ್ಮ ಅತೀ ದೊಡ್ಡ ಶತ್ರು, ಮಾನಸಿಕ ಒತ್ತಡಕ್ಕೆ ಒಳಗಾದರೆ ಅದರಿಂದ ಆರೋಗ್ಯ ಹಾಳು, ಮಾನಸಿಕ ನೆಮ್ಮದಿ ಹಾಳು, ನಮ್ಮ ಶಕ್ತಿಯೇ ಬತ್ತಿ ಹೋದಂಥ ಅನುಭವ. ಮಾನಸಿಕ ಒತ್ತಡಕ್ಕೆ ಒಳಗಾದಾಗ ಅನವಶ್ಯಕ ನಕಾರಾತ್ಮಕ ಆಲೋಚನೆಗಳು ತಲೆಗೆ ತುಂಬಿಕೊಳ್ಳುತ್ತದೆ. ಇದರಿಂದಾಗಿ ಕೆಲವರಿಗೆ ಖಿನ್ನತೆ ಕೂಡ ಉಂಟಾಗುವುದು, ಹಾಗಾಗಿ ಮಾನಸಿಕ ಒತ್ತಡ ಉಂಟಾದಾಗ ನೀವು ಅದರಿಂದ ಹೊರಬರಲು ಪ್ರಯತ್ನಿಸಲೇಬೇಕು.
ಮಾನಸಿಕ ಒತ್ತಡ ಕಡಿಮೆ ಮಾಡಲು ನಿಮಗೆ ಹಲವಾರು ದಾರಿಗಳಿವೆ, ಮ್ಯೂಸಿಕ್, ಹೀಲಿಂಗ್ ಮಸಾಜ್, ಸೌಂಡ್ ಹೀಲಿಂಗ್, ಧ್ಯಾನ ಹೀಗೆ ಅನೇಕ ವಿಧಾನಗಳಿವೆ, ಇವುಗಳ ಮೊರೆ ಹೋದರೆ ಮಾನಸಿಕ ಒತ್ತಡ ಕಡಿಮೆಯಾಗಿ ಒಂದು ಧನಾತ್ಮಕ ಚಿಂತನೆ ಮೂಡಲಾರಂಭಿಸುತ್ತದೆ.
ಮಾನಸಿಕ ಒತ್ತಡಕ್ಕೆ ಒಳಗಾದಾಗ ಸುಮ್ಮನೆ ಕೂತರೆ ಇದರಿಂದ ಮತ್ತಷ್ಟು ಕುಗ್ಗುತ್ತೇವೆ. ಆದ್ದರಿಂದ ಇವುಗಳಿಂದ ಹೊರಬರಲು ಪ್ರಯತ್ನಿಸಲೇಬೇಕು. ಮನಶಾಸ್ತ್ರಜ್ಞರ ಪ್ರಕಾರ ಮ್ಯೂಸಿಕ್ ಸಾಧನಗಳ ಶಬ್ದ , ಮಂತ್ರಗಳು ಇವೆಲ್ಲಾ ಮಾನಸಿಕ ಒತ್ತಡ ತುಂಬಾನೇ ಕಡಿಮೆ ಮಾಡುತ್ತೆ, ಹೇಗೆ ಎಂದು ನೋಡೋಣ ಬನ್ನಿ:
ಮಂತ್ರಗಳು
ಮಂತ್ರಗಳನ್ನು ಧಾರ್ಮಿಕ ಪೂಜೆಯಲ್ಲಿ ಮಾತ್ರ ಬಳಸುವುದು ಎಂದು ನೀವು ಭಾವಿಸಿದರೆ ಅದು ತಪ್ಪು, ಮಂತ್ರಗಳಿಗೆ ಮಾನಸಿಕ ಆರೋಗ್ಯ ವೃದ್ಧಿಸುವ ಶಕ್ತಿಯಿದೆ. ಇದು ವೈಜ್ಞಾನಿಕವಾಗಿ ಕೂಡ ಸಾಬೀತಾಗಿದೆ. ನೀವು ಮಂತ್ರಗಳನ್ನು ಪಠಿಸಿದರೆ ಅದು ಮಾನಸಿಕ ಒತ್ತಡ ಹೊರ ಹಾಕುತ್ತೆ, ನಿಮ್ಮಲ್ಲಿ ಧನಾತ್ಮಕ ಶಕ್ತಿ ಅನುಭವ ಉಂಟಾಗುವುದು. ಆಗ ನಿಮ್ಮ ಆಲೋಚನೆಗಳು, ನಿರ್ಧಾರಗಳು ಸರಿಯಾಗಿ ಇರುತ್ತದೆ.
ಓಂಕಾರ
ನೀವು ಕಣ್ಣುಗಳನ್ನು ಮುಚ್ಚಿ ಓಂಕಾರ ಪಠಿಸಿ ನೋಡಿ, ನಿಮ್ಮಲ್ಲಿಯೇ ಒಂದು ವೃಬ್ರೇಷನ್ ಫೀಲ್ ಆಗುತ್ತೆ, ಇದು ಧಾರ್ಮಿಕ ನಂಬಿಕೆಯಲ್ಲ, ನಿಮ್ಮ ಅನುಭವಕ್ಕೆ ಬರುವ ಸತ್ಯ. ಒಂದು ನಿಶ್ಯಬ್ದ ಸ್ಥಳದಲ್ಲಿ ಕೂತು ಸಮಸ್ಥಿತಿ ಭಂಗಿಯಲ್ಲಿ ಕುಳಿತುಕೊಳ್ಳಿ, ನಂತರ ಕಣ್ಣುಗಳನ್ನು ಮುಚ್ಚಿ ಓಂಕಾರ ಉಚ್ಛಾರಣೆ ಮಾಡಿ. ನೀವು ಓಂಕಾರ ಉಚ್ಛಾರಣೆ ಮಾಡುವಾಗ ನಿಮ್ಮ ಮನಸ್ಸಿನ ಗಮನ ನಿಮ್ಮ ಉಚ್ಛಾರಣೆಯ ಮೇಲಿಯೇ ಇರಲಿ. ಈ ರೀತಿ ಬೆಳಗ್ಗೆ ಸಂಜೆ 5 ನಿಮಿಷ ಮಾಡಿ ನೋಡಿ. ನಿಮ್ಮ ಮಾನಸಿಕ ಒತ್ತಡ ತುಂಬಾನೇ ಕಡಿಮೆಯಾಗುವುದು.