ನವದೆಹಲಿ: ಮೋರ್ಬಿ ಆಸ್ಪತ್ರೆಯ ರಾತ್ರೋರಾತ್ರಿ 'ಮೇಕ್ ಓವರ್ ಯೋಜನೆ'ಯನ್ನು ದೇಶದ ಎಲ್ಲಾ ಆಸ್ಪತ್ರೆಗಳಲ್ಲೂ ಜಾರಿಗೆ ತಂದು, ಇದಕ್ಕೆ ಗುಜರಾತ್ ಆಸ್ಪತ್ರೆ ಮಾದರಿ ಎಂದು ಹೆಸರಿಸಿ ಎಂದು ಕೇಂದ್ರ ಸರ್ಕಾರಕ್ಕೆ ಎನ್'ಸಿಪಿ ಸಲಹೆ ನೀಡಿದೆ.
140 ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದ ತೂಗು ಸೇತುವೆಯ ಕುಸಿತದಲ್ಲಿ ಗಾಯಗೊಂಡವರನ್ನು ಭೇಟಿ ಮಾಡಲು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಮೊರ್ಬಿ ನಗರದಲ್ಲಿನ ಆಸ್ಪತ್ರೆಗೆ ಭೇಟಿ ನೀಡಿದ್ದರು.
ಮೋದಿಯವರು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆಂಬ ಮಾಹಿತಿ ತಿಳಿಸಿದ ಅಧಿಕಾರಿಗಳು, ಆಸ್ಪತ್ರೆಯಲ್ಲಿ ದುರಸ್ಥಿ ಕಾರ್ಯಗಳನ್ನು ನೆರವೇರಿಸಿದ್ದರು.
ಇದನ್ನು ಎನ್‌ಸಿಪಿ ರಾಷ್ಟ್ರೀಯ ವಕ್ತಾರ ಕ್ಲೈಡ್ ಕ್ರಾಸ್ಟೊ ಟೀಕಿಸಿದ್ದಾರೆ. ಪ್ರಧಾನಿ ಮೋದಿ ಭೇಟಿಗೆ ಒಂದು ದಿನ ಮೊದಲು, ಮೋರ್ಬಿ ಸಿವಿಲ್ ಆಸ್ಪತ್ರೆಯು ಆಸ್ಪತ್ರೆಗೆ "ಸಂಪೂರ್ಣ ಮೇಕ್ ಓವರ್" ನೀಡಿದೆ. ಆಸ್ಪತ್ರೆಯಲ್ಲಿ ಮೋದಿಯವರನ್ನು ಸ್ವಾಗತಿಸಲು ರಾತ್ರೋರಾತ್ರಿ ಅಚ್ಚುಕಟ್ಟಾದ ವ್ಯವಸ್ಥೆ, ಸ್ವಚ್ಛತಾ ಕಾರ್ಯ ಹಾಗೂ ಆಸ್ಪತ್ರೆ ಆಧುನಿಕವಾಗಿ ಕಾಣುವಂತೆ ಮಾಡಲಾಗಿದೆ. ಮೋರ್ಬಿಯ ಸರ್ಕಾರಿ ಅಧಿಕಾರಿಗಳು ಪ್ರಧಾನಿಯವರ ಭೇಟಿಯನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದ್ದರೆಂದರೆ, ಹಾಳಾಗಿದ್ದ ಕುಡಿಯುವ ನೀರಿನ ಯಂತ್ರವನ್ನೂ ಬದಲಿಸಿ, ಕೂಲರ್ ಗಳೊಂದಿಗೆ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ. ಹೊಸ ಆಸ್ಪತ್ರೆಯಂತೆ ಕಾಣಿಸಲು ಶ್ರದ್ಧೆಯಿಂದ ಕೆಲಸ ಮಾಡಿದ್ದಾರೆ.
"ಈ ಬದಲಾವಣೆಯು ಭವಿಷ್ಯದಲ್ಲಿ ಆಸ್ಪತ್ರೆಗೆ ಭೇಟಿ ನೀಡುವ ಜನರಿಗೆ ಖಂಡಿತವಾಗಿ ಸಹಾಯ ಮಾಡುತ್ತದೆ. ಆದರೆ, ಪ್ರಸ್ತುತ ಉದ್ಭವಿಸಿರುವ ಪ್ರಶ್ನೆ ಎಂದರೆ, ಗುಜರಾತ್ ಸರ್ಕಾರ ಮತ್ತು ನಾಗರಿಕ ಅಧಿಕಾರಿಗಳು ರಾತ್ರೋರಾತ್ರಿ ಆಸ್ಪತ್ರೆಯ ಸ್ಥಿತಿಗತಿಗಳನ್ನು ಸರಿಪಡಿಸುವುದಾದರೆ, ದೇಶದ ಇತರೆ ಆಸ್ಪತ್ರಗಳನ್ನೇಕೆ ಸರಿ ಮಾಡಬಾರದು? ಎಂದು ಪ್ರಶ್ನಿಸಿದ್ದಾರೆ.
ಅಧಿಕಾರಿಗಳು ಬಯಸಿದರೆ, ಆಸ್ಪತ್ರೆಗಳನ್ನು ಯಾವಾಗ ಬೇಕಾದರೂ ಅಚ್ಚುಕಟ್ಟಾಗಿ, ಸ್ವಚ್ಛವಾಗಿ ಮತ್ತು ಆಧುನಿಕವಾಗಿ ಮಾಡಬಹುದು ಎಂಬುದು ಇದರಿಂದ ಸಾಬೀತಾಗಿದೆ. ಹೀಗಾಗಿ ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲೂ ಸರ್ಕಾರ ದುರಸ್ಥಿ ಕಾರ್ಯಗಳನ್ನು ಇದೇ ರೀತಿ ಮಾಡಬೇಕು. ಇಲ್ಲದೇ ಹೋದಲ್ಲಿ ಮೋರ್ಬಿ ಸೇತುವೆ ಕುಸಿತದ ಸಂತ್ರಸ್ತರಿಗೆ ಮತ್ತು ಗುಜರಾತ್‌ನ ಜನರಿಗೆ ಯಾವುದೇ ಪ್ರಾಮುಖ್ಯತೆ ಇಲ್ಲ, ಕೇವಲ ಪ್ರಧಾನಿ ಮೋದಿಯವವರ ಓಲೈಸಲಷ್ಟೇ ಮಾಡಲಾಗಿದೆ ಎಂಬುದು ಸಾಬೀತಾಗುತ್ತದೆ ಎಂದು ಹೇಳಿದ್ದಾರೆ.
ಅಲ್ಲದೆ, "ಕೇಂದ್ರ ಸರ್ಕಾರವು ದೇಶದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಮೋರ್ಬಿ ಸಿವಿಲ್ ಆಸ್ಪತ್ರೆಯ ರಾತ್ರೋರಾತ್ರಿ ಮೇಕ್ ಓವರ್ ಯೋಜನೆಯನ್ನು ಪುನರಾವರ್ತಿಸಬೇಕು ಮತ್ತು ಅದನ್ನು 'ಗುಜರಾತ್ ಆಸ್ಪತ್ರೆ ಮಾದರಿ' ಎಂದು ಕರೆಯಬೇಕು" ಎಂದು ಸಲಹೆ ನೀಡಿದ್ದಾರೆ.