ನವದೆಹಲಿ: ಮೇ ತಿಂಗಳಲ್ಲಿ ಮೊಹಾಲಿಯಲ್ಲಿರುವ ಪಂಜಾಬ್ ಪೊಲೀಸ್‌ನ ಗುಪ್ತಚರ ಕೇಂದ್ರ ಕಚೇರಿಯ ಮೇಲೆ ನಡೆದ ಆರ್‌ಪಿಜಿ ದಾಳಿಯ ಮಾಸ್ಟರ್‌ಮೈಂಡ್ ಎಂದು ಹೇಳಲಾದ ಗ್ಯಾಂಗ್‌ಸ್ಟರ್-ಖಾಲಿಸ್ತಾನ್ ಭಯೋತ್ಪಾದಕ ಹರ್ವಿಂದರ್ ಸಿಂಗ್ ಸಂಧು ಅಲಿಯಾಸ್ ರಿಂಡಾ ಪಾಕಿಸ್ತಾನದಲ್ಲಿ ಮೃತಪಟ್ಟಿದ್ದಾನೆ.
ಭದ್ರತಾ ಏಜೆನ್ಸಿಗಳ ಪ್ರಕಾರ, ಕೆಲವು ವರ್ಷಗಳ ಹಿಂದೆ ಪಾಕಿಸ್ತಾನಕ್ಕೆ ವಲಸೆ ಹೋಗಿದ್ದ ರಿಂಡಾ, ಖಲಿಸ್ತಾನ್ ಪರ ಭಯೋತ್ಪಾದಕ ಸಂಘಟನೆಯಾದ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್‌ನೊಂದಿಗೆ ಸಂಬಂಧ ಹೊಂದಿದ್ದನು. ರಿಂಡಾ ವಿರುದ್ಧ ಕೊಲೆ, ಕೊಲೆ ಯತ್ನ, ಅಪಹರಣ, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ 24ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದು, ಭಾರತದ ಮೋಸ್ಟ್ ವಾಂಟೆಡ್ ಗ್ಯಾಂಗ್ ಸ್ಟರ್ ನಲ್ಲಿ ಒಬ್ಬರಾಗಿದ್ದನು.
ಈ ವರ್ಷದ ಜೂನ್‌ನಲ್ಲಿ ಇಂಟರ್‌ಪೋಲ್ ರಿಂಡಾ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿತ್ತು. ಇಲ್ಲಿ ಎನ್‌ಐಎ ಆತನ ತಲೆಗೆ 10 ಲಕ್ಷ ಬಹುಮಾನ ಘೋಷಿಸಿತ್ತು. ಭದ್ರತಾ ಏಜೆನ್ಸಿಗಳ ಪ್ರಕಾರ, ಈ ವರ್ಷದ ಮಾರ್ಚ್‌ನಲ್ಲಿ ಪಂಜಾಬ್‌ನ ನವನ್‌ಶಹರ್‌ನಲ್ಲಿರುವ CIA (ಅಪರಾಧ ತನಿಖಾ ಕಚೇರಿ) ಕಚೇರಿಯ ಮೇಲೆ ಹ್ಯಾಂಡ್ ಗ್ರೆನೇಡ್ ದಾಳಿ ಮತ್ತು ರೂಪನಗರದ ಪೊಲೀಸ್ ಪೋಸ್ಟ್‌ನ ಹೊರಗೆ ನಡೆದ ದಾಳಿಯ ಹಿಂದೆ ರಿಂಡಾ ಕೂಡ ಇದ್ದಾನೆ. ಲುಧಿಯಾನ ಕೋರ್ಟ್ ಸ್ಫೋಟದಲ್ಲೂ ಈತ ಭಾಗಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ.