ಅಹಮದಾಬಾದ್: ಗುಜರಾತ್ನ ಮೊರ್ಬಿಯಲ್ಲಿ ಮಚ್ಚು ನದಿಗೆ ಅಡ್ಡಲಾಗಿ ನಿರ್ವಿುಸಲಾಗಿದ್ದ ಶತಮಾನಗಳಷ್ಟು ಹಳೆಯ ತೂಗುಸೇತುವೆ ಭಾನುವಾರ ಕುಸಿದ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ 141ಕ್ಕೇರಿದೆ. ಮೃತರಲ್ಲಿ 47 ಮಕ್ಕಳು ಸೇರಿದ್ದಾರೆ. ಈವರೆಗೆ 185 ಮಂದಿಯನ್ನು ರಕ್ಷಿಸಲಾಗಿದೆ.
ಇನ್ನೂ ಹಲವು ಮಂದಿ ನೀರಿನಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಾಗಿದೆ.
ರಕ್ಷಣೆ ಮಾಡಿರುವವರನ್ನು ಮೊರ್ಬಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ದುರಂತದಲ್ಲಿ ಬದುಕುಳಿದವರ ಆರೋಗ್ಯ ವಿಚಾರಿಸಲು ಇಂದು ಪ್ರಧಾನಿ ಮೋದಿ ಅವರು ಮೊರ್ಬಿ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಮೊರ್ಬಿ ಆಸ್ಪತ್ರೆಯ ಚಿತ್ರಣವೇ ಬದಲಾಗಿಬಿಟ್ಟಿದೆ. ಹಲವು ಮೂಲಸೌಕರ್ಯವಿಲ್ಲದೆ, ಕಳೆಗುಂದಿದ್ದ ಮೊರ್ಬಿ ಆಸ್ಪತ್ರೆಯನ್ನು ಒಂದೇ ದಿನದಲ್ಲಿ ನವೀಕರಣ ಮಾಡಲಾಗಿದೆ.
ಪ್ರಧಾನಿ ಭೇಟಿಗೂ ಮುನ್ನವೇ ರಾತ್ರೋರಾತ್ರಿ ಆಸ್ಪತ್ರೆಯ ದುರಸ್ತಿ ಕಾರ್ಯವನ್ನು ನಡೆಸಲಾಗಿದ್ದು, ಪ್ರಧಾನಿ ಮುಂದೆ ಮುಖಭಂಗವಾಗ ಆಗಬಾರದು ಅಂತಾ ತಮ್ಮ ಹುಳುಕುಗಳನ್ನು ಸರ್ಕಾರ ಮುಚ್ಚಿಕೊಳ್ಳುವ ಪ್ರಯತ್ನ ಮಾಡಿದೆ. ಕೆಲವು ಗೋಡೆಗಳು ಮತ್ತು ಸೀಲಿಂಗ್ಗೆ ಹೊಸದಾಗಿ ಬಣ್ಣ ಬಳಿಯಲಾಗಿದೆ. ಅಲ್ಲದೆ, ಹೊಸ ವಾಟರ್ ಕೂಲರ್ಸ್ಗಳನ್ನು ತರಲಾಗಿದೆ. ಸುಮಾರು 13 ಗಾಯಗಳುಗಳು ದಾಖಲಾಗಿರುವ ಎರಡು ವಾರ್ಡಿನ ಬೆಡ್ಶೀಟ್ಗಳನ್ನು ಬದಲಾಯಿಸಲಾಗಿದೆ. ಸಾಕಷ್ಟು ಕೆಲಸಗಾರರು ರಾತ್ರಿಯೆಲ್ಲ ಕೆಲಸ ಮಾಡಿದ್ದು, ಆಸ್ಪತ್ರೆಗೆ ಹೊಸ ರೂಪ ನೀಡಿದ್ದಾರೆ. ಆದರೆ, ಹಳೆಯ ವಾಟರ್ ಕೂಲರ್ಸ್, ಹಾನಿಯಾದ ಗೋಡೆಗಳು ಮತ್ತು ಸೀಲಿಂಗ್ನ ಫೋಟೋಗಳು ಆಸ್ಪತ್ರೆಯ ನಿಜವಾದ ಚಿತ್ರಣವನ್ನು ಸಾರುತ್ತಿವೆ.
ಉನ್ನತ ಸರ್ಕಾರಿ ಅಧಿಕಾರಿಗಳು ಭೇಟಿ ನೀಡುವ ಮೊದಲು ಸರ್ಕಾರಿ ಕಟ್ಟಡ, ರಸ್ತೆ, ಶಾಲಾ-ಕಾಲೇಜು ಮತ್ತು ಆಸ್ಪತ್ರೆಗಳ ನವೀಕರಣವು ಸಾಮಾನ್ಯ. ಆದರೆ, ಇದನ್ನೇ ಗುರಿಯಾಗಿಸಿಕೊಂಡಿರುವ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿ (ಎಎಪಿ), ತಮ್ಮ ಟ್ವಿಟರ್ನಲ್ಲಿ ಮೊರ್ಬಿ ಆಸ್ಪತ್ರೆಯ ನವೀಕರಣ ಮಾಡುತ್ತಿರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಬಿಜೆಪಿಯು ಪ್ರಧಾನಿಯವರಿಗೆ 'ಫೋಟೋಶೂಟ್' ಅನ್ನು ಖಚಿತಪಡಿಸಿಕೊಳ್ಳಲು 'ಈವೆಂಟ್ ಮ್ಯಾನೇಜ್‌ಮೆಂಟ್' ನಲ್ಲಿ ನಿರತವಾಗಿದೆ ಎಂದು ಆರೋಪಿಸಿದೆ.
ಮೊರ್ಬಿ ಆಸ್ಪತ್ರೆಗೆ ಪ್ರಧಾನಿ ಮೋದಿ ಇಂದು ಭೇಟಿ ಮುನ್ನ ಪೇಟಿಂಗ್ ನಡೆಯುತ್ತಿದೆ. ಹೊಳಪಾದ ಟೈಲ್ಸ್ಗಳನ್ನು ಅಳವಡಿಸಲಾಗುತ್ತಿದೆ. ಪ್ರಧಾನಿಯವರ ಫೋಟೋಶೂಟ್ಗೆ ಯಾವುದೇ ಲೋಪವಾಗದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ದುರಂತದಿಂದ ಅನೇಕ ಜನರು ಸತ್ತಿದ್ದರೆ, ಇವರು (ಬಿಜೆಪಿ) ಈವೆಂಟ್ ಮ್ಯಾನೇಜ್ಮೆಂಟ್ನಲ್ಲಿ ತೊಡಗಿದ್ದಾರೆ. ನಾಚಿಕೆಯಾಗುವುದಿಲ್ಲವೇ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಕಿಡಿಕಾರಿದೆ.