ಚೆನ್ನೈ: ಕಾಂಗ್ರೆಸ್ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು 2008ರಲ್ಲಿ ನನ್ನನ್ನು ಭೇಟಿಯಾಗಿ ತಮ್ಮ ತಂದೆ ರಾಜೀವ್ ಗಾಂಧಿ ಅವರ ಹತ್ಯೆಯ ಕುರಿತು ಕೇಳಿದ್ದರೆಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಬಿಡುಗಡೆಗೊಂಡಿರುವ ನಳಿನಿ ಶ್ರೀಹರನ್ ಭಾನುವಾರ ತಿಳಿಸಿದ್ದಾರೆ.
ಒಂದು ದಶಕದ ಹಿಂದೆ ವೆಲ್ಲೂರಿನ ಕೇಂದ್ರ ಕಾರಾಗೃಹದಲ್ಲಿ ಪ್ರಿಯಾಂಕಾ ಗಾಂಧಿ ಅವರು ನನ್ನನ್ನು ಭೇಟಿಯಾಗಿ ತುಂಬಾ ಭಾವುಕರಾಗಿ ಕಣ್ಣೀರು ಹಾಕಿದ್ದರು. ಜೊತೆಗೆ ತಮ್ಮ ತಂದೆ ಹತ್ಯೆಯ ಕುರಿತು ಕೆಲವು ಪ್ರಶ್ನೆಗಳನ್ನು ಕೇಳಿದ್ದರು. ಅವರಿಗೆ ನನಗೆ ತಿಳಿದಿರುವಷ್ಟು ಮಾಹಿತಿಯನ್ನು ಬಹಿರಂಗಪಡಿಸಿದ್ದೇನೆ. ಇದು ಅವರ ವೈಯಕ್ತಿಕ ಭೇಟಿಯಾಗಿದ್ದು ಇದನ್ನೂ ಎಲ್ಲೂ ಪ್ರಚಾರ ಮಾಡಿಲ್ಲ ಎಂದು ಅವರು ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದನ್ವಯ ನಳಿನಿ ಶ್ರೀಹರನ್ ಅವರನ್ನು ನ.12 ರಂದು ಕಾರಾಗೃಹದಿಂದ ಬಿಡುಗಡೆಗೊಳಿಸಲಾಗಿದೆ.