ನವದೆಹಲಿ: 'ಬಲವಂತದ ಧಾರ್ಮಿಕ ಮತಾಂತರದ ವಿರುದ್ಧ ಕೇಂದ್ರ ಸರ್ಕಾರವು ಶೀಘ್ರವಾಗಿ ಕಾನೂನನ್ನು ಜಾರಿಗೆ ತರಬೇಕು' ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮಂಗಳವಾರ ಒತ್ತಾಯಿಸಿದೆ.
'ಬಲವಂತದ ಮತಾಂತರವು ಅತ್ಯಂತ ಗಂಭೀರವಾದ ವಿಚಾರ.
ಇದನ್ನು ತಡೆಯದೇ ಇದ್ದರೆ ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿ ಎದುರಾಗಲಿದೆ' ಎಂದು ಸುಪ್ರೀಂ ಕೋರ್ಟ್ ಹೇಳಿದ ಮರುದಿನವೇ ವಿಎಚ್‌ಪಿ ಈ ರೀತಿಯಾಗಿ ಹೇಳಿಕೆ ನೀಡಿದೆ.
'ಈ ಸಂಬಂಧದ ಪ್ರಕರಣಗಳು ಮತ್ತು ವಿಷಯ ಕುರಿತು ಇದುವರೆಗೆ ರಚಿಸಲಾದ ವಿವಿಧ ಆಯೋಗಗಳು ಬಲವಂತದ ಮತಾಂತರವು ಧಾರ್ಮಿಕ ಸ್ವಾತಂತ್ರ್ಯವಷ್ಟೇ ಅಲ್ಲ, ರಾಷ್ಟ್ರೀಯ ಭದ್ರತೆಯ ಮೂಲಭೂತ ಹಕ್ಕಿಗೂ ಬೆದರಿಕೆಯುಂಟು ಮಾಡುವಂಥದ್ದು ಎಂದು ತೀರ್ಮಾನಿಸಿವೆ' ಎಂದು ವಿಎಚ್‌ಪಿಯ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
'ನ್ಯಾಯಾಂಗವು ಈ ಹಿಂದೆಯೂ ಹಲವು ಪ್ರಕರಣಗಳಲ್ಲಿ ಬಲವಂತದ ಮತಾಂತರದ ಕುರಿತು ಕೇಂದ್ರ ಸರ್ಕಾರ ಕಾನೂನು ರೂಪಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದೆ. ಮತಾಂತರ ಸಮಸ್ಯೆಯಿಂದ ಭಾರತವನ್ನು ಮುಕ್ತಗೊಳಿಸಲು ಶಾಸನವನ್ನು ರೂಪಿಸುವುದು ಸದ್ಯದ ಅಗತ್ಯವಾಗಿದೆ' ಎಂದೂ ಅವರು ಹೇಳಿದ್ದಾರೆ.
'ಬಲವಂತದ ಮತಾಂತರವನ್ನು ತಡೆಯಲು ಪ್ರಸ್ತುತ ಎಂಟು ರಾಜ್ಯಗಳಲ್ಲಿ ಮಾತ್ರ ಕಾನೂನನ್ನು ಜಾರಿಗೊಳಿಸಲಾಗಿದೆ. ಆದರೆ, ಈ ಸಮಸ್ಯೆಯು ರಾಷ್ಟ್ರವ್ಯಾಪಿಯಾದುದು. ಬಲವಂತದ ಮತಾಂತರದ ವಿರುದ್ಧ ವಿಎಚ್‌ಪಿಯ ಈ ಹಿಂದೆ ಹಲವು ನಿರ್ಣಯಗಳನ್ನೂ ಅಂಗೀಕರಿಸಿದೆ. ಈ ರೀತಿಯ ಮತಾಂತರವು ಸಾಮಾಜಿಕ ಸಾಮರಸ್ಯಕ್ಕೂ ಧಕ್ಕೆ ತರುತ್ತದೆ' ಎಂದು ಜೈನ್ ಅಭಿಪ್ರಾಯಪಟ್ಟಿದ್ದಾರೆ.
'ದೇಶವು ಸ್ವಾತಂತ್ರ್ಯ ಪಡೆದ ನಂತರ ಬಲವಂತದ ಮತಾಂತರದ ವಿಷಯದ ಕುರಿತು ಪರಿಶೀಲಿಸಲು ರಚಿಸಲಾದ ಎಲ್ಲಾ ಆಯೋಗಗಳು ಇದನ್ನು ತಡೆಯಲು ಕೇಂದ್ರ ಸರ್ಕಾರವು ಕಾನೂನು ಜಾರಿಗೆ ತರಬೇಕೆಂಬ ಸ್ಪಷ್ಟ ಅಭಿಪ್ರಾಯನ್ನು ಹೊಂದಿದ್ದವು' ಎಂದೂ ಅವರು ಪ್ರತಿಪಾದಿಸಿದ್ದಾರೆ.
ಕಾನೂನುಬಾಹಿರ ಬಲವಂತದ ಧಾರ್ಮಿಕ ಮತಾಂತರಕ್ಕೆ ಕಡಿವಾಣ ಹಾಕಲು ಕೇಂದ್ರವು ಕಾನೂನನ್ನು ಜಾರಿಗೆ ತರಬೇಕೆಂದು ವಿಎಚ್‌ಪಿಯು ಬಹುದಿನಗಳಿಂದ ಒತ್ತಾಯಿಸುತ್ತಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಲವಂತದ ಮತಾಂತರದ ವಿರುದ್ಧ ರಾಷ್ಟ್ರವ್ಯಾಪಿ ಅಭಿಯಾನವನ್ನೂ ಆರಂಭಿಸಿತ್ತು.