ಶ್ರೀನಗರ: ಕಾಶ್ಮೀರದ 47 ವಿಧಾನಸಭಾ ಕ್ಷೇತ್ರಗಳಿಗೆ ನ್ಯಾಷನಲ್ ಕಾನ್ಫರೆನ್ಸ್(ಎನ್‌ಸಿ) ತನ್ನ ಉಸ್ತುವಾರಿಗಳ ಹೆಸರುಗಳನ್ನು ಘೋಷಿಸಿದ್ದು, ಈ ಮೂಲಕ ಗುಪ್ಕಾರ್ ಕೂಟದ(ಪಿಎಜಿಡಿ) ಭವಿಷ್ಯ ಅತಂತ್ರಗೊಂಡಿದೆ ಎಂದು ಮೂಲಗಳು ಹೇಳಿವೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಈ ಉಸ್ತುವಾರಿಗಳು ಪಕ್ಷದ ಅಭ್ಯರ್ಥಿಗಳಾಗುವ ಸಾಧ್ಯತೆ ಇದೆ ಎಂದೂ ತಿಳಿಸಿವೆ.
ಉಸ್ತುವಾರಿಗಳ ಪಟ್ಟಿಯಲ್ಲಿ ಫಾರೂಖ್ ಅಬ್ದುಲ್ಲಾ ಮತ್ತು ಅವರ ಮಗ ಒಮರ್ ಅಬ್ದುಲ್ಲಾ ಅವರ ಹೆಸರುಗಳು ಇಲ್ಲ. ಆದರೂ ಚುನಾವಣೆ ಘೋಷಣೆಯಾದರೆ ಇವರು ಅಭ್ಯರ್ಥಿಗಳಾಗಿ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ.
ಕಾಶ್ಮೀರದಲ್ಲಿ ರಾಜ್ಯದ ಸ್ಥಾನಮಾನ ಪುನರ್ ಸ್ಥಾಪಿಸುವವರೆಗೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬ ನಿಲುವನ್ನು ಒಮರ್ ಅವರು ಪ್ರಕಟಿಸಿದ್ದಾರೆ. ಆದರೆ ಚುನಾವಣಾ ದಿನಾಂಕ ಪ್ರಕಟವಾದ ಬಳಿಕ ಅವರು ತಮ್ಮ ಅಂತಿಮ ತೀರ್ಮಾನವನ್ನು ತಿಳಿಸಲಿದ್ದಾರೆ ಎಂದೂ ವಿವರಿಸಿವೆ.
ಪಿಎಜಿಡಿಯ ಯಾವುದೇ ಘಟಕಗಳ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಆಗಸ್ಟ್‌ನಲ್ಲಿ ಎನ್.ಸಿ ಹೇಳಿತ್ತು. ಕೇಂದ್ರಾಡಳಿತ ಪ್ರದೇಶದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದೂ ತಿಳಿಸಿತ್ತು.
ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ, ಅವಾಮಿ ನ್ಯಾಷನಲ್ ಕಾನ್ಫರೆನ್ಸ್, ಸಿಪಿಎಂ ಮತ್ತು ಸಿಪಿಐ ಸೇರಿರುವ ಗುಪ್ಕಾರ್ ಕೂಟವನ್ನು ಜಮ್ಮ ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಬಳಿಕ ರಚಿಸಲಾಗಿತ್ತು. ವಿಶೇಷ ಸ್ಥಾನಮಾನವನ್ನು ಪುನರ್ ಸ್ಥಾಪಿಸಬೇಕೆಂದು ಆಗ್ರಹಿಸಿ ಈ ಕೂಟವು ಹೋರಾಟ ನಡೆಸುತ್ತಿದೆ.
'ಪಿಎಜಿಡಿ ಯಾವಾಗಲೂ ಇರುತ್ತದೆ. ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿಗಳು ಮುಂದಿನ ಶಾಸಕರಲ್ಲ. ಕೆಲವರು ಅವರಿಗೆ ತೋಚಿದಂತೆ ಹೇಳುತ್ತಿದ್ದಾರೆ. ನಾವು ಅವರಿಗೆಲ್ಲಾ ಉತ್ತರ ನೀಡುವುದಿಲ್ಲ' ಎಂದು ಎನ್.ಸಿ ಅಧ್ಯಕ್ಷ ಫಾರೂಖ್ ಅಬ್ದುಲ್ಲಾ ಸ್ಪಷ್ಟಪಡಿಸಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಿಂದಲೂ ನ್ಯಾಷನಲ್ ಕಾನ್ಫರೆನ್ಸ್ ಸ್ಪರ್ಧಿಸಲು ತೀರ್ಮಾನಿಸಿರುವುದರಿಂದ ಗುಪ್ಕಾರ್ ಕೂಟವು ಕೊನೆಯ ದಿನಗಳನ್ನು ಎಣಿಸುತ್ತಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.