ಶಿಮ್ಲಾ: ಭಾರತದ ಮೊದಲ ಮತದಾರ ಶ್ಯಾಮ್ ಶರಣ್ ನೇಗಿ ಅವರು ಶನಿವಾರ ಬೆಳಗ್ಗೆ ಹಿಮಾಚಲ ಪ್ರದೇಶದ ಕಿನ್ನೌರ್‌ನಲ್ಲಿರುವ ತಮ್ಮ ನಿವಾಸದಲ್ಲಿ ವಯೋಸಹಜ ಕಾರಣಗಳಿಂದ ನಿಧನರಾದರು. ಇವರಿಗೆ 106 ವರ್ಷ ವಯಸ್ಸಾಗಿತ್ತು.
1951 ಅಕ್ಟೋಬರ್ 25ರಂದು ನೇಗಿ ಅವರು ದೇಶದ ಮೊದಲ ಮತ ಚಲಾಯಿಸಿದ್ದರು.
ಇದು 1952ರ ಲೋಕಸಭೆ ಚುನಾವಣೆಯ ಮುಂಚಿತ ಮತದಾನವಾಗಿದೆ. ಫೆಬ್ರುವರಿ ತಿಂಗಳಲ್ಲಿ ಹೆಚ್ಚು ಹಿಮಪಾತವಾಗುತ್ತದೆ ಎಂಬ ಕಾರಣಕ್ಕೆ ಐದು ತಿಂಗಳು ಮೊದಲೇ ಮತದಾನ ಪ್ರಕ್ರಿಯೆ ನಡೆಸಲಾಗಿತ್ತು.
ಪ್ರಸಕ್ತ ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಅವರು ನವೆಂಬರ್ 2ರಂದು ಅಂಚೆ ಮತದಾನ ಮಾಡಿದ್ದಾರೆ. ಹಿಮಾಚಲ ಪ್ರದೇಶ ಚುನಾವಣೆ ನವೆಂಬರ್ 12ರಂದು ನಿಗದಿಯಾಗಿದೆ.
ನೇಗಿ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಚುನಾವಣೆ ಆಯೋಗವು, ಇವರು ಕೇವಲ ಸ್ವತಂತ್ರ ಭಾರತದ ಮೊದಲ ಮತದಾರ ಮಾತ್ರವಲ್ಲ, ಪ್ರಜಾಪ್ರಭುತ್ವದಲ್ಲಿ ಅಸಾಧಾರಣ ನಂಬಿಕೆ ಇರಿಸಿಕೊಂಡಿದ್ದ ವ್ಯಕ್ತಿ. ರಾಷ್ಟ್ರಕ್ಕೆ ಅವರ ಸೇವೆ ಪ್ರಶಂಸನೀಯ ಎಂದು ಸ್ಮರಿಸಿದ್ದಾರೆ.
ನಿಧನರಾಗುವ ಮುನ್ನ ಮತದಾನ ಮಾಡುವ ಮೂಲಕ ಲಕ್ಷಾಂತರ ಮಂದಿಗೆ ಸ್ಫೂರ್ತಿಯಾಗಿದ್ದಾರೆ. ನವೆಂಬರ್ 2ರಂದು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಅಂಚೆ ಮತದ ಮೂಲಕ ಮತದಾನ ಮಾಡಿದ್ದಾರೆ ಎಂದು ಚುನಾವಣೆ ಆಯೋಗ ತಿಳಿಸಿದೆ.
ಬಿಜೆಪಿ, ಕಾಂಗ್ರೆಸ್ ಮತ್ತಿತರ ಪಕ್ಷಗಳೂ ನೇಗಿ ಅವರ ನಿಧನಕ್ಕೆ ಸಂತಾಪ ಸೂಚಿಸಿವೆ.
ನೇಗಿ ಅವರು ಮತದಾನ ಮಾಡಿದ ಕೆಲವು ದಿನಗಳ ಬಳಿಕ ಕಿನ್ನೌರ್‌ನ ಡಿಸಿ ಅವರ ಮನೆಗೆ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದ್ದರು.