ತಿರುವನಂತರಪುರ: ಚರ್ಚ್‌ನಲ್ಲಿ ಏಕರೂಪದ ಪ್ರಾರ್ಥನಾ ಸಭೆ ಜಾರಿಗೊಳಿಸುವುದಕ್ಕೆ ಸಂಬಂಧಿಸಿ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ಎರ್ನಾಕುಳಂನ ಅಂಗಮಾಲಿಯಲ್ಲಿ ಭಾನುವಾರ ಉದ್ವಿಗ್ನ ಸ್ಥಿತಿ ಉಂಟಾಗಿತ್ತು. ಪೊಲೀಸರು ಮಧ್ಯಪ್ರದೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.
ಸೈರೊ ಮಲಬಾರ್ ಕ್ಯಾಥೋಲಿಕ್ ಚರ್ಚ್ ಅಡಿ ಬರುವ ಸೇಂಟ್ ಮೇರೀಸ್ ಕ್ಯಾಥೆಡ್ರಲ್ ಬೆಸಿಲಿಕಾದಲ್ಲಿ ಏಕರೂಪದ ಸಾಮೂಹಿಕ ಪ್ರಾರ್ಥನಾ ಸಭೆ ಆಯೋಜನೆಯು ಒಂದು ವರ್ಷದಿಂದ ಜಾರಿಯಲ್ಲಿತ್ತು. ಈ ಪದ್ಧತಿಯನ್ನೇ ಎಲ್ಲಾ ಚರ್ಚ್‌ಗಳಲ್ಲೂ ಜಾರಿಗೆ ತರಲು ಚರ್ಚ್ ಮಂಡಳಿ ನಿರ್ಧರಿಸಿತ್ತು. ಈ ಕುರಿತು ಪರ ಮತ್ತು ವಿರೋಧ ಚರ್ಚೆಗಳು ನಡೆಯುತ್ತಲೇ ಇದ್ದವು.
ಈ ನೀತಿಯನ್ನು ವಿರೋಧಿಸುತ್ತಿದ್ದ ವರ್ಗವು ಆರ್ಚ್‌ಬಿಷಪ್‌ರಾದ ಆಯಂಡ್ರೂಸ್ ತಾಜ್ಹಾತ್ ಅವರು ಚರ್ಚ್ ಒಳಗೆ ಪ್ರವೇಶಿಸದಂತೆ ಭಾನುವಾರ ಚರ್ಚ್ ದ್ವಾರಕ್ಕೆ ಬೀಗ ಹಾಕಿದ್ದಾರೆ. ಇದು ಮತ್ತೊಂದು ವರ್ಗದವರನ್ನು ಕೆರಳಿಸಿತು. ಈ ಹಿನ್ನೆಲೆಯಲ್ಲಿ ಉಭಯ ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಈ ವೇಳೆ ಹಲವಾರು ಆಸ್ತಿಪಾಸ್ತಿ ಹಾನಿಗೀಡಾಗಿವೆ.
ಎರಡೂ ವರ್ಗದವರನ್ನು ಚರ್ಚ್‌ನಿಂದ ಹೊರಕಳಿಸಿದ ಪೊಲೀಸರು ಚರ್ಚ್‌ಗೆ ಬೀಗ ಹಾಕಿದ್ದಾರೆ. ಈ ವಿವಾದ ಇತ್ಯರ್ಥ ಆಗುವವರೆಗೂ ಚರ್ಚ್ ಅನ್ನು ಜಿಲ್ಲಾಡಳಿತದ ನಿಯಂತ್ರಣಕ್ಕೆ ಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ.