ಮಂಜೇಶ್ವರ: ಕಾಸರಗೋಡು ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಕಣ್ಣೂರು ವಿಶ್ವವಿದ್ಯಾನಿಲಯದ ಮಂಜೇಶ್ವರ ಕ್ಯಾಂಪಸ್‍ನಲ್ಲಿ ಎಲ್.ಎಲ್.ಎಂ.ತರಗತಿಗಳು ಆರಂಭವಾಗುತ್ತಿದ್ದು, ಪ್ರವೇಶ ಪ್ರಕ್ರಿಯೆ ಮುಗಿದು ಇಂದಿನಿಂದ( ಶುಕ್ರವಾರದಿಂದ) ವಿದ್ಯಾರ್ಥಿಗಳ ಅಧ್ಯಯನಕ್ಕೆ ಚಾಲನೆ ದೊರಕಲಿದೆ.
ಜಿಲ್ಲೆಯಲ್ಲಿಯೇ ಪ್ರಪ್ರಥಮ ಬಾರಿಗೆ ಕಾನೂನು ಅಧ್ಯಯನಕ್ಕೆ ಸ್ಥಾಪನೆಯಾಗಿರುವ ಈ ಕ್ಯಾಂಪಸ್ ನಿರ್ವಹಣೆಗೆ ಮೂಲಸೌಕರ್ಯ ಒದಗಿಸದಿರುವುದು ಆರಂಭದಲ್ಲೇ ಹಿನ್ನಡೆಗೆ ಕಾರಣವಾಗುವ ಭೀತಿ ಆವರಿಸಿದೆ. ಕಾಲೇಜು ಕ್ಯಾಂಪಸ್ ಗೆ ತೆರಳಲು ರಸ್ತೆ ಇಲ್ಲದೇ ಇರುವುದರಿಂದ ಆಗಮಿಸುವ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪರದಾಡಬೇಕಾಗಲಿದೆ. ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಹೊಂಡ ಗುಂಡಿಗಳಿಂದ ಕಾಲ್ನಡಿಗೆಯಲ್ಲಿ ಸಂಚರಿಸಲು ಕೂಡ ದುಸ್ತರವಾಗಿದೆ. ಕಿಲೋಮೀಟರ್ ತನಕ ರಸ್ತೆ ಗುಂಡಿಗಳಿಂದ ರಸ್ತೆಗಳು ಪೂರ್ಣವಾಗಿಯೂ ಹದೆಗೆಟ್ಟಿರುವುದರಿಂದ ಇಲ್ಲಿಗೆ ಆಟೋರಿಕ್ಷಾಗಳು ಆಗಮಿಸಲು ಹಿಂದೇಟು ಹಾಕುತ್ತಿವೆ. ದ್ವಿಚಕ್ರ ವಾಹನಗಳು ರಸ್ತೆಯ ಹೊಂಡ ಮತ್ತು ಗುಂಡಿಗಳಲ್ಲಿ ಬಿದ್ದು ಅಪಘಾತ ಕೂಡಾ ಇಲ್ಲಿ ಸರ್ವಸಾಮಾನ್ಯವಾಗಿದೆ.
ಮಂಜೇಶ್ವರ ಕ್ಯಾಂಪಸನ್ನು ಶೈಕ್ಷಣಿಕ ಶ್ರೇಷ್ಠತೆಯ ಕೇಂದ್ರವನ್ನಾಗಿ ಮಾಡುವುದು ಗುರಿಯಾಗಿದೆ ಎಂದಿರುವ ಸರ್ಕಾರ ಮುಂದಿನ ಐದು ವರ್ಷಗಳಲ್ಲಿ ಇದನ್ನು ಭಾಷಾ ವೈವಿಧ್ಯತೆಯ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿರುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇತ್ತೀಚೆಗೆ ಕಟ್ಟಡದ ಉದ್ಘಾಟನಾ ಸಂದರ್ಭದಲ್ಲಿ ಹೇಳಿದ್ದರು.
ಇμÉ್ಟೂಂದು ದೊಡ್ಡ ವಿಶ್ವವಿದ್ಯಾನಿಲಯ ಕ್ಯಾಂಪಸ್ ನಿರ್ಮಿಸುವಾಗ ಅದಕ್ಕೆ ಸರಿಯಾದ ರಸ್ತೆ ನಿರ್ಮಿಸದಿರುವುದು ಜಿಲ್ಲೆಗೆ ನಾಚಿಕೆಗೇಡಿನ ಸಂಗತಿ. ಸಂಬಂಧಪಟ್ಟವರು ಆದಷ್ಟು ಬೇಗ ಇದಕ್ಕೊಂದು ಪರಿಹಾರ ಕಂಡುಕೊಳ್ಳದಿದ್ದರೆ ಕಾಲೇಜು ಆರಂಭದಲ್ಲೇ ನೆನೆಗುದಿಗೆ ಬೀಳಬಹುದೆಂಬುದು ಸ್ಥಳೀಯರ ಚಿಂತೆಯಾಗಿದೆ.
ಮಂಜೇಶ್ವರ ಕಾನೂನು ಕಾಲೇಜು ಇಂದು ಆರಂಭ: ಆರಂಭದಲ್ಲೇ ಎದ್ದು ಕಾಣುವ ಮೂಲಸೌಕರ್ಯ ಕೊರತೆ
0
ನವೆಂಬರ್ 25, 2022
Tags