ಅಲಪ್ಪುಳ: ಎಲ್ಲಾ ರೀಲ್ ಲೈಫ್ ಹೀರೋಗಳು ನಿಜ ಜೀವನದಲ್ಲಿಯೂ ಹೀರೋ ಆಗಲು ಸಾಧ್ಯವಿಲ್ಲ. ಆದರೆ ದಕ್ಷಿಣ ಭಾರತದ ನಟ ಅಲ್ಲು ಅರ್ಜುನ್ ಅವರು ಖಂಡಿತವಾಗಿಯೂ ತಾನು ನಿಜ ಜೀವನದಲ್ಲೂ ಹೀರೊ ಎಂದು ಸಾಬೀತುಪಡಿಸಿದ್ದಾರೆ.
'ಪುಷ್ಪಾ' ಚಿತ್ರದ ನಟ ತನ್ನ ನರ್ಸಿಂಗ್ ಅಧ್ಯಯನವನ್ನು ಮುಂದುವರಿಸಲು ದಾರಿ ಕಂಡುಕೊಳ್ಳಲು ಹೆಣಗಾಡುತ್ತಿದ್ದ ಕೇರಳದ ವಿದ್ಯಾರ್ಥಿನಿಗೆ ಸಹಾಯ ಹಸ್ತ ಚಾಚಿದ್ದಾರೆ ಹಾಗೂ ಎಲ್ಲಾ ಖರ್ಚುಗಳನ್ನು ಭರಿಸುವ ಮೂಲಕ ನಾಲ್ಕು ವರ್ಷಗಳ ಅವಧಿಯ ಕೋರ್ಸ್ ಅನ್ನು ಪ್ರಾಯೋಜಿಸುವ ಭರವಸೆ ನೀಡಿದ್ದಾರೆ.
ಅಲಪ್ಪುಳ ಜಿಲ್ಲಾಧಿಕಾರಿ ವಿ.ಆರ್. ಕೃಷ್ಣ ತೇಜ ಅವರು ತಮ್ಮ ಫೇಸ್‌ಬುಕ್ ಪುಟದ ಮೂಲಕ ಅಲ್ಲು ಅರ್ಜುನ್ ಅವರ ಉದಾತ್ತ ನಡೆಯನ್ನು ತಿಳಿಸಿದ್ದಾರೆ.
ಗುರುವಾರ ಫೇಸ್‌ಬುಕ್ ಪೋಸ್ಟ್‌ನಲ್ಲಿ ವಿದ್ಯಾರ್ಥಿನಿ, ಮುಸ್ಲಿಂ ಹುಡುಗಿ ತನ್ನ ಅಧ್ಯಯನವನ್ನು ಮುಂದುವರಿಸಲು ಸಹಾಯ ಕೋರಿ ತನ್ನನ್ನು ಭೇಟಿಯಾಗಲು ಹೇಗೆ ಬಂದಿದ್ದಾಳೆ ಎಂಬುದನ್ನು ಜಿಲ್ಲಾಧಿಕಾರಿ ವಿವರಿಸಿದ್ದಾರೆ.
ವಿದ್ಯಾರ್ಥಿನಿ ಪ್ಲಸ್ ಟು ಪರೀಕ್ಷೆಗಳಲ್ಲಿ 92 ಪ್ರತಿಶತ ಅಂಕಗಳನ್ನು ಗಳಿಸಿದ್ದರೂ, ಕಳೆದ ವರ್ಷ ಕೋವಿಡ್ -19 ನಿಂದ ಆಕೆಯ ತಂದೆ ನಿಧನರಾದ ನಂತರ ಆರ್ಥಿಕ ಅಡಚಣೆಗಳಿಂದ ಆಕೆಗೆ ಅಧ್ಯಯನವನ್ನು ಮುಂದುವರಿಸಲು ಸಾಧ್ಯವಾಗಿರಲಿಲ್ಲ.
ಆಂಧ್ರಪ್ರದೇಶ ಮೂಲದ ಜಿಲ್ಲಾಧಿಕಾರಿ ಸಹಾಯ ಕೋರಿ ಟಾಲಿವುಡ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅವರನ್ನು ಸಂಪರ್ಕಿಸಿದ್ದರು.
'ಈ ಉದ್ದೇಶಕ್ಕಾಗಿ ನಮ್ಮ ನೆಚ್ಚಿನ ಸಿನಿಮಾ ನಟ ಅಲ್ಲು ಅರ್ಜುನ್‌ಗೆ ಕರೆ ಮಾಡಿದ್ದು, ವಿಷಯ ತಿಳಿದ ತಕ್ಷಣ ಹಾಸ್ಟೆಲ್ ಶುಲ್ಕ ಸೇರಿದಂತೆ ಸಂಪೂರ್ಣ ವ್ಯಾಸಂಗ ವೆಚ್ಚವನ್ನು ಒಂದು ವರ್ಷದ ಬದಲು ನಾಲ್ಕು ವರ್ಷಗಳ ಕಾಲ ಭರಿಸಲು ಒಪ್ಪಿಕೊಂಡಿದ್ದಾರೆ''ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.