ನವದೆಹಲಿ: ಮಧ್ಯಪ್ರದೇಶದ ಮಂದಸೌರ್‌ನಲ್ಲಿ ₹5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಯನ್ನು ಸಿಬಿಐ ಮಂಗಳವಾರ ಬಂಧಿಸಿದೆ. ಲಂಚ ನೀಡದಿದ್ದರೆ ಭಾರಿ ದಂಡ ಮತ್ತು ಕಂಪನಿ ಮೇಲೆ ದಾಳಿ ನಡೆಸುವುದಾಗಿ ಉದ್ಯಮಿಯೊಬ್ಬರಿಗೆ ಅಧಿಕಾರಿ ಬೆದರಿಸಿದ್ದ.
ಮಂದಸೌರ್‌ನಲ್ಲಿರುವ ಆದಾಯ ತೆರಿಗೆ ಕಚೇರಿಯಲ್ಲಿ ತೆರಿಗೆ ಮೌಲ್ಯಮಾಪನ ನಡೆಸುತ್ತಿರುವ ಮಹಾರಾಷ್ಟ್ರ ಮೂಲದ ಸಂಸ್ಥೆಯೊಂದರ ದೂರಿನ ಮೇರೆಗೆ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.
ಆದಾಯ ತೆರಿಗೆ ಇಲಾಖೆ ಅಧಿಕಾರಿ ರಾಮಗೋಪಾಲ್ ಪ್ರಜಾಪತಿ ₹5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟ ಅಧಿಕಾರಿ. ದೂರು ಸ್ವೀಕರಿಸಿದ ಬಳಿಕ ಸಿಬಿಐ ವಿಚಾರಣೆ ನಡೆಸಿದ್ದು ಅಧಿಕಾರಿ ಲಂಚಕ್ಕೆ ಬೇಡಿಕೆ ಇಟ್ಟಿರುವುದು ಖಚಿತವಾಗಿದೆ. ಬಳಿಕ ಅಧಿಕಾರಿಯನ್ನು ಲಂಚ ನೀಡುವ ನೆಪದಲ್ಲಿ ಬಲೆ ಬೀಸಿ ಬಂಧಿಸಿದೆ. ಬುಧವಾರ ಆರೋಪಿಯನ್ನು ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಿದೆ.