ನವದೆಹಲಿ: ವೈದ್ಯರ ಕಡ್ಡಾಯ ಸೇವೆಗೆ ಜಾರಿಗೊಳಿಸಿದ್ದ ಬಾಂಡ್ ನೀತಿಯನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‌ಎಂಸಿ) ಶಿಫಾರಸುಗಳ ಆಧಾರದ ಮೇಲೆ ತೆಗೆದುಹಾಕುವ ಸಲುವಾಗಿ ಮಾರ್ಗಸೂಚಿಗಳನ್ನು ಅಂತಿಮಗೊಳಿಸಲು ಕೇಂದ್ರ ಆರೋಗ್ಯ ಸಚಿವಾಲಯವು ಕಾರ್ಯನಿರತವಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಬಾಂಡ್ ನೀತಿ ಪ್ರಕಾರ, ವೈದ್ಯಕೀಯ ಪದವಿ ಮತ್ತು ವೈದ್ಯಕೀಯ ಸ್ನಾತಕೋತ್ತರ ಪದವಿ ಪಡೆದ ನಂತರ ವೈದ್ಯರು ರಾಜ್ಯ ಸರ್ಕಾರದ ಆಸ್ಪತ್ರೆಗಳಲ್ಲಿ ನಿರ್ದಿಷ್ಟ ಅವಧಿಗೆ ಸೇವೆ ಸಲ್ಲಿಸಲೇಬೇಕು. ಇದರಲ್ಲಿ ವಿಫಲವಾದರೆ ಸರ್ಕಾರಕ್ಕೆ ಅಥವಾ ವೈದ್ಯಕೀಯ ಕಾಲೇಜಿಗೆ ದಂಡ ಪಾವತಿಸಬೇಕು (ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮೊದಲೇ ನಿರ್ದಿಷ್ಟಪಡಿಸಿದ ದಂಡ).
ರಾಜ್ಯಗಳ ಈ ಬಾಂಡ್ ನೀತಿಯನ್ನು ಸುಪ್ರೀಂ ಕೋರ್ಟ್ 2019ರ ಆಗಸ್ಟ್‌ನಲ್ಲಿ ಎತ್ತಿಹಿಡಿದಿದೆ. ಹಾಗೆಯೇ ಕೆಲವು ರಾಜ್ಯ ಸರ್ಕಾರಗಳು ಕಠಿಣ ಷರತ್ತುಗಳನ್ನು ವಿಧಿಸುತ್ತವೆ ಎಂಬುದನ್ನು ಗಮನಿಸಿದ್ದ ಉನ್ನತ ನ್ಯಾಯಾಲಯವು, ಸರ್ಕಾರಿ ಕಾಲೇಜುಗಳಲ್ಲಿ ತರಬೇತಿ ಪಡೆದ ವೈದ್ಯರು ಸಲ್ಲಿಸಬೇಕಾದ ಕಡ್ಡಾಯ ಸೇವೆಯ ಬಗ್ಗೆ ದೇಶದಾದ್ಯಂತ ಎಲ್ಲ ರಾಜ್ಯಗಳಿಗೂ ಅನ್ವಯಿಸುವಂತೆ ಕೇಂದ್ರ ಮತ್ತು ವೈದ್ಯಕೀಯ ಮಂಡಳಿಯು ಏಕರೂಪದ ನೀತಿ ರೂಪಿಸಬೇಕು ಎಂದು ಸೂಚಿಸಿತ್ತು ಎಂದು ಅಧಿಕೃತ ಮೂಲವು ತಿಳಿಸಿದೆ.
ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಕೇಂದ್ರ ಆರೋಗ್ಯ ಸಚಿವಾಲಯವು 2019ರಲ್ಲಿ ಬಾಂಡ್ ನೀತಿ ಬಗ್ಗೆ ಪರಿಶೀಲಿಸಲು ಆರೋಗ್ಯ ಸೇವೆಗಳ ಪ್ರಧಾನ ನಿರ್ದೇಶನಾಲಯದ ಪ್ರಧಾನ ಸಲಹೆಗಾರರಾದ ಡಾ.ಬಿ.ಆರ್. ಅಥಣಿ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತ್ತು. ಈ ಸಮಿತಿ 2020ರ ಮೇನಲ್ಲಿ ವರದಿ ಸಲ್ಲಿಸಿ, ಅದನ್ನು ಎನ್‌ಎಂಸಿ ಅಭಿಪ್ರಾಯಕ್ಕಾಗಿ ಕಳುಹಿಸಿಕೊಡಲಾಗಿತ್ತು. ಇದನ್ನು ಪರಾಮರ್ಶೆ ಮಾಡಿದ ಎನ್‌ಎಂಸಿ ವಿವರವಾದ ಅಭಿಪ್ರಾಯ, ಶಿಫಾರಸುಗಳನ್ನು 2021ರ ಫೆಬ್ರುವರಿಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಸಲ್ಲಿಸಿತ್ತು. ವೈದ್ಯ ವಿದ್ಯಾರ್ಥಿಗಳಿಗೆ ಯಾವುದೇ ಬಾಂಡ್ ನೀತಿ ಹೊರೆಯಾಗಬಾರದು. ಬಾಂಡ್ ನೀತಿ ಸಹಜ ನ್ಯಾಯಕ್ಕೆ ವಿರುದ್ಧವಾಗಿರುವುದಾಗಿ ಪ್ರತಿಪಾದಿಸಿತ್ತು ಎಂದು ಮೂಲಗಳು ಹೇಳಿವೆ.
'ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ವೈದ್ಯರ ಲಭ್ಯತೆ ಹೆಚ್ಚಿಸಲು ಕಡ್ಡಾಯ ಗ್ರಾಮೀಣ ಸೇವೆ ಇರಬೇಕೆಂಬುದರ ಬಗ್ಗೆ ಒಮ್ಮತಾಭಿಪ್ರಾಯ ಇರುವುದನ್ನು ಗಮನಿಸಲಾಯಿತು. ಅಲ್ಲದೆ, ಬಾಂಡ್ ಹಣಕಾಸಿನ ಹೊರತಾಗಿರಬೇಕು ಮತ್ತು ಆಡಳಿತಾತ್ಮಕ ಕಾರ್ಯವಿಧಾನದ ಮೂಲಕ ಕಾರ್ಯಗತಗೊಳಿಸುವಂತಿರಬೇಕು ಎಂದು ಸಭೆಯಲ್ಲಿ ಚರ್ಚೆಯಾಗಿದೆ' ಎಂದು ಮೂಲ ತಿಳಿಸಿದೆ.