ಅಮೃತಸರ: ಮಾದಕವಸ್ತು ಕಳ್ಳಸಾಗಣೆ ಉದ್ದೇಶದಿಂದ ಪಾಕಿಸ್ತಾನದಿಂದ ಪಂಜಾಬ್‌ನ ಅಮೃತಸರದ ಮೂಲಕ ಭಾರತದ ಗಡಿಯೊಳಗೆ ಪ್ರವೇಶಿಸುತ್ತಿದ್ದ ಡ್ರೋನ್‌ವೊಂದನ್ನು ಗಡಿ ರಕ್ಷಣಾ ಪಡೆಯ (ಬಿಎಸ್‌ಎಫ್) ಇಬ್ಬರು ಮಹಿಳಾ ಕಾನ್‌ಸ್ಟೆಬಲ್‌ಗಳು ಹೊಡೆದುರುಳಿಸಿದರು.
ಡ್ರೋನ್‌ನಲ್ಲಿ 3.1 ಕೆ.ಜಿ ತೂಕದ ಮಾದಕವಸ್ತುಗಳು ಪತ್ತೆಯಾಗಿವೆ.
'ಅಮೃತಸರದ ಛತರಪುರ ಗ್ರಾಮದೊಳಗೆ ಡ್ರೋನ್ ಬರುತ್ತಿರುವುದರನ್ನು ಸೋಮವಾರ ರಾತ್ರಿ ವೇಳೆಗೆ ಬಿಎಸ್‌ಎಫ್‌ನ ಮಹಿಳಾ ತಂಡವು ಗಮನಿಸಿತು. ಇಬ್ಬರು ಮಹಿಳಾ ಕಾನ್‌ಸ್ಟೇಬಲ್‌ಗಳು ಡ್ರೋನ್ ಮೇಲೆ ಒಟ್ಟು 25 ಸುತ್ತು ಗುಂಡು ಹಾರಿಸಿದರು. ರಾತ್ರಿ 11.05ರ ವೇಳೆಗೆ ಡ್ರೋನ್ ಪತನಗೊಂಡಿತು' ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದರು.
'18 ಕೆ.ಜಿ ತೂಕವಿದ್ದ ಡ್ರೋನ್‌ನಲ್ಲಿ ಬಿಳಿಯ ಪಾಲಿಥಿನ್ ಕವರ್‌ವೊಂದರಲ್ಲಿ ಸುತ್ತಿದ್ದ 3.11 ಕೆ.ಜಿ ಮಾದಕವಸ್ತುಗಳು ಪತ್ತೆಯಾಗಿವೆ. ಡ್ರೋನ್‌ನಲ್ಲಿ ಆರು ರೌಟರ್ ಇದ್ದವು. ಇದೊಂದು ಮಾನವರಹಿತ ಡ್ರೋನ್ ಆಗಿತ್ತು' ಎಂದು ಅವರು ತಿಳಿಸಿದರು.
ಮತ್ತೊಂದು ಡ್ರೋನ್ ಪತ್ತೆ: 'ಛತರಪುರದಲ್ಲೊಂದೆ ಅಲ್ಲದೆ, ವದಾಯಿ ಚೀಮಾ ಗಡಿಯಲ್ಲೂ ಸೋಮವಾರ 10.57ರ ಸುಮಾರಿಗೆ ಡ್ರೋನ್‌ವೊಂದು ಪತ್ತೆಯಾಗಿದೆ. ಬಿಎಸ್‌ಎಫ್ ಯೋಧರು ಡ್ರೋನ್ ಮೇಲೆ ಗುಂಡಿನ ದಾಳಿ ನಡೆಸಿದರು. ತಕ್ಷಣದಲ್ಲಿಯೇ ಈ ಡ್ರೋನ್ ಮರಳಿ ಪಾಕಿಸ್ತಾನಕ್ಕೆ ತೆರಳಿತು' ಎಂದರು.
ಕಳೆದ ಶುಕ್ರವಾರ ಅಮೃತಸರದ ಗಡಿ ಹತ್ತಿರದಲ್ಲಿ ಪಾಕಿಸ್ತಾನದ ಡ್ರೋನ್‌ವೊಂದನ್ನು ಬಿಎಸ್‌ಎಫ್ ಯೋಧರು ಹೊಡೆದುರುಳಿಸಿದ್ದರು.