ನವದೆಹಲಿ: ದೇಶದ ತಿರುಚಿದ ಇತಿಹಾಸವನ್ನು ತಿದ್ದಿ ಬರೆಯುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಅಹೋಮ್ ಜನರಲ್ ಲಚಿತ್ ಬರ್ಫುಕನ್ ಅವರ 400ನೇ ಜನ್ಮದಿನಾಚರಣೆಯ ಪ್ರಯುಕ್ತ ಮಾತನಾಡಿದ ಅವರು, ಭಾರತದ ಇತಿಹಾಸದ 30 ಮಹಾನ್ ಸಾಮ್ರಾಜ್ಯಗಳು ಮತ್ತು ಮಾತೃಭೂಮಿಗಾಗಿ ಹೋರಾಡಿದ 300 ಧೀರ ಯೋಧರ ಬಗ್ಗೆ ಬರೆಯಿರಿ ಎಂದು ಇತಿಹಾಸಕಾರರಿಗೆ ಕರೆ ನೀಡಿದರು.
ಧಾರ್ಮಿಕ ಮತಾಂಧ ಔರಂಗಜೇಬನಿಂದ ಈಶಾನ್ಯ ಭಾರತ ಮಾತ್ರವಲ್ಲದೆ ಆಗ್ನೇಯ ಏಷ್ಯಾವನ್ನು ಲಚಿತ್ ಬರ್ಫುಕನ್ ರಕ್ಷಿಸಿದರು ಎಂದು ಅವರು ಉಲ್ಲೇಖ ಮಾಡಿದರು.
ಲಚಿತ್ ಬರ್ಫುಕನ್ ಜೀವನ ಚರಿತ್ರೆ ಕುರಿತಾದ ಸಾಹಿತ್ಯ ಕೃತಿಗಳನ್ನು ಹಿಂದಿ ಸೇರಿದಂತೆ 10 ಭಾರತೀಯ ಪ್ರಾದೇಶಿಕ ಭಾಷೆಗಳಿಗೆ ಭಾಷಾಂತರಿಸಲು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರನ್ನು ವಿನಂತಿಸಿದರು.
ದೇಶದ ಇತಿಹಾಸವನ್ನು ತಿರುಚಲಾಗಿದೆ ಎಂಬುದರ ಬಗ್ಗೆ ನನಗೆ ಆಗಾಗ್ಗೆ ದೂರುಗಳು ಕೇಳಿಬರುತ್ತಿವೆ. ಈ ಆರೋಪಗಳು ನಿಜವಾಗಿರಬಹುದು. ಈಗ ಇತಿಹಾಸವನ್ನು ಸರಿಪಡಿಸುವುದನ್ನು ಯಾರು ತಡೆಯುತ್ತಾರೆ? ಎಂದು ಕೇಳಿದರು.
ತಿರುಚಿದ ಇತಿಹಾಸವನ್ನು ತಿದ್ದಿ ಬರೆದಾಗ ಭಾರತದ ನಿಜವಾದ ಇತಿಹಾಸ ರಚನೆಯಾಗುತ್ತದೆ ಮತ್ತು ಸುಳ್ಳುಗಳು ಕೊನೆಯಾಗುತ್ತವೆ. ದೇಶದ ವೈಭವವನ್ನು ಬೆಂಬಲಿಸುವ ಸರ್ಕಾರ ಕೇಂದ್ರದಲ್ಲಿದ್ದು, ದೇಶದ ಭವ್ಯ ಇತಿಹಾಸ ಮರುಸೃಷ್ಟಿಯ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಗತಕಾಲದ ವೈಭವದಿಂದ ಹೆಮ್ಮೆಪಡದ ಮತ್ತು ವೀರರಿಂದ ಸ್ಫೂರ್ತಿ ಪಡೆಯದ ದೇಶವು ಉಜ್ವಲ ಭವಿಷ್ಯ ಮತ್ತು ಉತ್ತಮ ನಾಗರಿಕರನ್ನು ರೂಪಿಸಲು ಸಾಧ್ಯವಿಲ್ಲ ಎಂದು ಹೇಳಿದರು.