ನವದೆಹಲಿ: 'ಭಯೋತ್ಪಾದನಾ ದಾಳಿಗಳ ಕುರಿತು ನೇರಪ್ರಸಾರದಲ್ಲಿ ವರದಿಗಾರಿಕೆ ಮಾಡುವಾಗ ಸಾಕಷ್ಟು ಎಚ್ಚರಿಕೆ ವಹಿಸಬೇಕು. ವರದಿಗಾರಿಕೆಯು ದಾಳಿಕೋರರಿಗೆ ಸುಳಿಯು ನೀಡುವಂತಿರಬಾರದು' ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಮಾಧ್ಯಮಗಳಿಗೆ ಸಲಹೆ ನೀಡಿದರು.
ಪ್ರಸಾರ ಭಾರತಿ ಆಯೋಜಿಸಿರುವ 59ನೇ ಏಷ್ಯಾ-ಪೆಸಿಫಿಕ್ ಬ್ರಾಡ್‌ಕಾಸ್ಟಿಂಗ್ ಯೂನಿಯನ್‌ನ (ಎಬಿಯು) ಸಾಮಾನ್ಯ ಸಭೆಯಲ್ಲಿ ಮಂಗಳವಾರ ಅವರು ಮಾತನಾಡಿದರು.
'ಭೂಕಂಪ, ಬೆಂಕಿ ಅವಘಡದಂಥ ಸಂದರ್ಭಗಳಲ್ಲಿ ಜವಾಬ್ದಾರಿಯುತವಾಗಿ ವರದಿಗಾರಿಕೆ ಮಾಡಬೇಕಾಗುತ್ತದೆ. ಅದರಲ್ಲೂ ಭಯೋತ್ಪಾದನಾ ದಾಳಿಯಂಥ ಸಂದರ್ಭದಲ್ಲಿ ಇನ್ನಷ್ಟು ಎಚ್ಚರಿಕೆ ವಹಿಸಬೇಕು' ಎಂದರು.
'ಜನರಿಗೆ ಬಹುಬೇಗ ಸುದ್ದಿ ತಲುಪಬೇಕು ಎನ್ನುವುದು ಎಷ್ಟು ಮುಖ್ಯವೊ, ನಿಖರವಾದ ಸುದ್ದಿ ತಲುಪಬೇಕು ಎನ್ನುವುದು ಅಷ್ಟೇ ಮುಖ್ಯವಾಗಿದೆ. ಸುದ್ದಿ ಸಂಸ್ಥೆಗಳು ಈ ಕುರಿತು ನಿಗಾವಹಿಸಬೇಕು' ಎಂದರು.
ಕೋವಿಡ್ ಕಾಲದಲ್ಲಿ ಮಾಧ್ಯಮ ನಿರ್ವಹಿಸಿ ಪಾತ್ರದ ಕುರಿತು ಸಚಿವ ಠಾಕೂರ್ ಮೆಚ್ಚುಗೆ ವ್ಯಕ್ತಪಡಿಸಿದರು. 'ಜನ ಸೇವೆ: ಬಿಕ್ಕಟಿನ ಕಾಲದಲ್ಲಿ ಮಾಧ್ಯಮಗಳ ಪಾತ್ರ' ಈ ವರ್ಷದ ಸಭೆಯ ವಿಷಯವಾಗಿದೆ.