ನವದೆಹಲಿ:ನವೆಂಬರ್ 19 ರಂದು ನೇಮಕಗೊಂಡ ಚುನಾವಣಾ ಆಯುಕ್ತ (Election Commissioner) ಅರುಣ್ ಗೋಯೆಲ್ (Arun Goel) ಅವರ ನೇಮಕಾತಿಗೆ ಸಂಬಂಧಿಸಿದ ಕಡತವನ್ನು ತನ್ನ ಮುಂದೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ (Supreme Court) ಬುಧವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಭಾರತದ ಚುನಾವಣಾ ಆಯೋಗದ ನೇಮಕಾತಿ ಪ್ರಕ್ರಿಯೆಯ ಕುರಿತು ಕೆಲವು ತೀಕ್ಷ್ಣವಾದ ಪ್ರತಿಕ್ರಿಯೆ ಮತ್ತು ಪ್ರಶ್ನೆಗಳನ್ನಿಟ್ಟಿದ್ದು, ಈ ಕುರಿತ ವಿಚಾರಣೆ ಗುರುವಾರವೂ ಮುಂದುವರಿಯಲಿದೆ.
ಅರುಣ್ ಗೋಯೆಲ್ ರನ್ನು ಇತ್ತೀಚೆಗೆ ಸ್ವಯಂ ನಿವೃತ್ತಿ ನೀಡಿದ ತಕ್ಷಣ ಚುನಾವಣಾ ಸಂಸ್ಥೆಗೆ ನೇಮಕ ಮಾಡಲಾಗಿರುವ ಹಿನ್ನೆಲೆಯಲ್ಲಿ, ಈ ನೇಮಕಾತಿಯಲ್ಲಿ ಯಾವುದೇ "ಸಂದೇಹಾಸ್ಪದ ಸಂಗತಿ" ನಡೆದಿದೆಯೇ ಎಂದು ತಿಳಿಯಲು ನ್ಯಾಯಮೂರ್ತಿ ಕೆಎಂ ಜೋಸೆಫ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಬಯಸಿದೆ.
ಅರುಣ್ ಗೋಯೆಲ್ ಅವರ ನೇಮಕವನ್ನು ವಕೀಲ ಪ್ರಶಾಂತ್ ಭೂಷಣ್ ಅವರು ಪ್ರಕ್ರಿಯೆಯ ಮೇಲಿನ ಅರ್ಜಿಗಳ ಬ್ಯಾಚ್ ವಿಚಾರಣೆಯ ಸಂದರ್ಭದಲ್ಲಿ ಪ್ರಸ್ತಾಪಿಸಿದ್ದರು. ಇತ್ತೀಚೆಗಷ್ಟೇ ನಿವೃತ್ತರಾದ ಐಎಎಸ್ ಅಧಿಕಾರಿ ಗೋಯೆಲ್ ಅವರನ್ನು ಮೂರು ಸದಸ್ಯರ ಚುನಾವಣಾ ಆಯೋಗದ ಭಾಗವಾಗಿ ಮಾಡಲಾಗಿದೆ ಎನ್ನುವುದನ್ನು ಭೂಷಣ್ ನ್ಯಾಯಾಲಯಕ್ಕೆ ತಿಳಿಸಿದ್ದರು.
"ಅರುಣ್ ಗೋಯೆಲ್ ಅವರು ಗುರುವಾರದವರೆಗೆ, ಸರ್ಕಾರದಲ್ಲಿ ಕಾರ್ಯದರ್ಶಿ ಮಟ್ಟದ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ, ಶುಕ್ರವಾರ ಅವರಿಗೆ VRS ನೀಡಲಾಯಿತು ಮತ್ತು ಚುನಾವಣಾ ಆಯುಕ್ತರಾಗಿ ನೇಮಿಸಲಾಯಿತು," ಎಂದು ಪ್ರಶಾಂತ್ ಭೂಷಣ್ ಹೇಳಿದರು. ವಿಆರ್‌ಎಸ್ ಇಲ್ಲದಿದ್ದರೆ ಅವರು ಡಿಸೆಂಬರ್ 31 ರಂದು 60 ನೇ ವಯಸ್ಸಿನಲ್ಲಿ ನಿವೃತ್ತಿ ಹೊಂದಬೇಕಿತ್ತು.
ಸರ್ಕಾರಿ ವಕೀಲರಾದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರ ಆಕ್ಷೇಪಣೆಗಳನ್ನು ನ್ಯಾಯಾಲಯ ತಿರಸ್ಕರಿಸಿದ್ದು, ಅವರು ವೈಯಕ್ತಿಕ ನಿದರ್ಶನಗಳನ್ನು ತೆಗೆದುಕೊಳ್ಳುವುದು ಸರಿಯಲ್ಲ ಎಂದು ಹೇಳಿದರು.
"ಯಾವ ಕಾರ್ಯವಿಧಾನ ಎಂಬುದನ್ನು ನಾವು ನೋಡಬಯಸುತ್ತೇವೆ. ನಾವು ಅದನ್ನು ಎದುರಾಳಿಯಾಗಿ ಪರಿಗಣಿಸುವುದಿಲ್ಲ ಮತ್ತು ಅದನ್ನು ನಮ್ಮ ದಾಖಲೆಗಾಗಿ ಇಡುವುದಿಲ್ಲ, ಆದರೆ ಎಲ್ಲವನ್ನೂ ನಾವು ತಿಳಿದುಕೊಳ್ಳಲು ಬಯಸುತ್ತೇವೆ. ನಿಮಗೆ ನಾಳೆಯವರೆಗೆ ಸಮಯವಿದೆ" ಎಂದು ನ್ಯಾಯಾಲಯವು ಹೇಳಿದೆ.