ನವದೆಹಲಿ: ಅನುದಾನಿತ ಎಲ್ಲ ಮದರಸಾಗಳನ್ನು ಸಾಮಾನ್ಯ ಸರ್ಕಾರಿ ಶಾಲೆಗಳಾಗಿ ಪರಿವರ್ತಿಸುವ ಅಸ್ಸಾಂ ಸರ್ಕಾರದ ನಿರ್ಧಾರ ಎತ್ತಿಹಿಡಿದಿದ್ದ ಗುವಾಹಟಿ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಗೆ ಪ್ರತಿಕ್ರಿಯಿಸಲು ಸುಪ್ರೀಂ ಕೋರ್ಟ್ ಮಂಗಳವಾರ ಅಸ್ಸಾಂ ಸರ್ಕಾರ ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿದೆ.
ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ಸಿ.ಟಿ. ರವಿಕುಮಾರ್ ಅವರಿದ್ದ ಪೀಠ ಈ ನೋಟಿಸ್ ಜಾರಿ ಮಾಡಿದೆ. ಅಸ್ಸಾಂ ಮದರಸಾ ಶಿಕ್ಷಣ (ಪ್ರಾಂತೀಕರಣ) ಕಾಯ್ದೆ 1995 (2020ರಲ್ಲಿ ರದ್ದಾದ ಕಾಯ್ದೆ) ಮತ್ತು 2021ರ ಫೆಬ್ರುವರಿ 12ರಂದು ಸರ್ಕಾರ ಹೊರಡಿಸಿರುವ ಅಧಿಸೂಚನೆ ಸೇರಿದಂತೆ ಎಲ್ಲ ಆದೇಶಗಳ ಮಾನ್ಯತೆ ದೃಢೀಕರಿಸುವ ಆದೇಶದ ವಿರುದ್ಧ ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ಪೀಠ ವಿಚಾರಣೆ ನಡೆಸಿತು.
ಮಹಮದ್ ಇಮಾದ್ ಉದ್ದೀನ್ ಬಾರ್ಬುಯಿಯಾ ಮತ್ತು ಇತರರ ಪರವಾಗಿ ಮೇಲ್ಮನವಿ ಸಲ್ಲಿಸಿರುವ ವಕೀಲ ಆದೀಲ್ ಅಹ್ಮದ್, ಮೂಲಕ ಸಲ್ಲಿಸಿದ ಮನವಿ, ಅರ್ಜಿದಾರರ ಮದರಸಾಗಳನ್ನು ಸರ್ಕಾರಿ ಶಾಲೆಗಳೆಂದು ಹೈಕೋರ್ಟ್ ತಪ್ಪಾಗಿ ಭಾವಿಸಿದೆ. ಮದರಸಾಗಳ ಪ್ರಾಂತೀಕರಣದಿಂದ ಸಂವಿಧಾನದ ವಿಧಿ 28 (1)ಕ್ಕೆ ಧಕ್ಕೆಯಾಗಲಿದೆ. ಅಲ್ಲದೆ, ಈ ವಿಧಿಯ ಪ್ರಕಾರ ಧಾರ್ಮಿಕ ಸೂಚನೆಗಳಿ ಅವಕಾಶವಿಲ್ಲ ಎಂದು ವಾದಿಸಿದರು.
ಅರ್ಜಿದಾರರನ್ನು ಪ್ರತಿನಿಧಿಸುತ್ತಿರುವ ಮತ್ತೊಬ್ಬ ಹಿರಿಯ ವಕೀಲ ಸಂಜಯ್ ಹೆಗ್ಡೆ, ನ್ಯಾಯಾಲಯವು ಮದರಸಾಗಳ ಪ್ರಾಂತೀಕರಣವನ್ನು ರಾಷ್ಟ್ರೀಕರಣದೊಂದಿಗೆ ತಪ್ಪಾಗಿ ಸಮೀಕರಿಸಿದೆ. ಅರ್ಜಿದಾರರ ಮದರಸಾಗಳಿಗೆ ಸೂಕ್ತ ಪರಿಹಾರ ನೀಡದೆ ಸರ್ಕಾರ ಅತಿಕ್ರಮಿಸಿಕೊಳ್ಳುವುದೂ ಸಂವಿಧಾನದ ವಿಧಿ 30 (1ಎ) ಉಲ್ಲಂಘನೆ ಎಂದು ಪೀಠದ ಎದುರು ಅರ್ಜಿದಾರರ ಪರವಾಗಿ ವಾದಿಸಿದರು.